ಸೋಮವಾರಪೇಟೆ, ನ. 15: ಹಾನಗಲ್ಲು ಗ್ರಾ.ಪಂ., ಹಾನಗಲ್ಲು ಶೆಟ್ಟಳ್ಳಿ ಗ್ರಾಮಸ್ಥರು, ಚಂದ್ರೋದಯ ಯುವಕ ಸಂಘ, ಸರಸ್ವತಿ ಯುವತಿ ಮಂಡಳಿ, ಸ್ವಸಹಾಯ ಸಂಘಗಳ ಆಶ್ರಯದಲ್ಲಿ ಸಮೀಪದ ಹಾನಗಲ್ಲು ಶೆಟ್ಟಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ 29ನೇ ವರ್ಷದ ಗ್ರಾಮೀಣ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು.
ಕ್ರೀಡಾಕೂಟವನ್ನು ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವೆಂಕಟೇಶ್ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತಿರುವ ಕ್ರೀಡಾಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಇಂತಹ ಕ್ರೀಡಾಕೂಟ ಅವಶ್ಯಕ ಎಂದರು. ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಮುಂದಿನ ತಲೆಮಾರಿಗೂ ಪರಿಚಯಿಸುವ ಕಾರ್ಯ ಎಲ್ಲರಿಂದ ಆಗಬೇಕು ಎಂದು ಅಭಿಪ್ರಾಯಿಸಿದರು.
ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಸ್ಪರ್ಧೆಗಳು ನಡೆದವು. ಇದರೊಂದಿಗೆ ಗ್ರಾಮದ ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರತಿದಿನ ಕಾಫಿ ತೋಟ, ಗದ್ದೆಗಳಲ್ಲಿಯೇ ದಿನ ಕಳೆಯುತ್ತಿದ್ದ ಕೃಷಿಕರು, ಕ್ರೀಡಾಕೂಟದಂದು ಶಾಲಾ ಮೈದಾನದಲ್ಲಿ ಸಂಭ್ರಮದಿಂದ ಕಾಲ ಕಳೆದರು.
ಕಾರ್ಯಕ್ರಮದಲ್ಲಿ ಚಂದ್ರೋದಯ ಯುವಕ ಸಂಘದ ಅಧ್ಯಕ್ಷ ಎಂ.ಟಿ. ಸುರೇಶ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಥೇರೆಸ, ಶಿಕ್ಷಕ ಶಿವಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಹೆಚ್.ಕೆ. ರಮೇಶ್, ಪ್ರಮುಖರಾದ ಅಶ್ವಿನಿ ಕೃಷ್ಣಕಾಂತ್, ಮೀರಾ ರಾಜೇಂದ್ರ, ಹೆಚ್.ಎಂ. ವಿಠಲ ಮತ್ತಿತರರು ಉಪಸ್ಥಿತರಿದ್ದರು.