ಗೋಣಿಕೊಪ್ಪ ವರದಿ: ಮಕ್ಕಳ ದಿನಾಚರಣೆ ಪ್ರಯುಕ್ತ ಇಲ್ಲಿನ ಲಯನ್ಸ್ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಛದ್ಮವೇಶ ಸ್ಪರ್ಧೆ ನಡೆಯಿತು. ಮಕ್ಕಳು ಹಲವು ಬಗೆಯ ಉಡುಪು ತೊಟ್ಟು ಗಮನ ಸೆಳೆದರು.

ಮಡಿಕೇರಿ: ಮಕ್ಕಳ ದಿನಾಚರಣೆಯ ಅಂಗವಾಗಿ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಪುಟಾಣಿ ಮಕ್ಕಳಿಗೆ ಏರ್ಪಡಿಸಿದ್ದ ಛದ್ಮವೇಷ ಸ್ಪರ್ಧೆಯಲ್ಲಿ ಹಲವಾರು ಮಕ್ಕಳು ಭಾಗವಹಿಸಿ ಮೆರುಗು ನೀಡಿದರು. ಶಿವ, ಕೃಷ್ಣ, ಆಕ್ಟೋಪಸ್, ದ್ರಾಕ್ಷಿ ಗೊಂಚಲಿನ ವೇಷಧರಿಸಿ ಪುಟಾಣಿಗಳು ರಂಜಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಅನಂತ ಪದ್ಮನಾಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶೋಭಾ ಅನಂತ ಪದ್ಮನಾಭರವರು ಉಪಸ್ಥಿತರಿದ್ದರು. ಶಿಕ್ಷಕಿ ಉಷಾ ನಿರೂಪಿಸಿ, ಮರಿಯಾ ಸ್ವಾಗತಿಸಿ, ಸಂಧ್ಯಾ ವಂದಿಸಿದರು.ಸುಂಟಿಕೊಪ್ಪ: ಇಲ್ಲಿನ ಜ್ಞಾನಧಾರ ಶಿಶುವಿಹಾರದ 2ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕೊಡಗರಹಳ್ಳಿ ನಾಡು ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಸಾವಿತ್ರಿ ಮಾತನಾಡಿ, ಬಾಲ್ಯದಲ್ಲೇ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಗೌರವ, ಸ್ಪರ್ಧೆ ಇವುಗಳನ್ನು ಕಲಿಸಿದಾಗ ಮಾತ್ರ ಮುಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಯಾವದೇ ತೊಂದರೆಗಳಾಗದೆ ದೇಶದ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.

ವಾರ್ಷಿಕೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಾದ ಮಕ್ಕಳಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು. ಜ್ಞಾನಧಾರ ಶಿಶುವಿಹಾರದ ಮುಖ್ಯ ಶಿಕ್ಷಕಿ ಶಾಂತಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಶುವಿಹಾರದ ಅಧ್ಯಕ್ಷೆ ಲೀಲಾ ಮೇದಪ್ಪ ವಹಿಸಿದ್ದರು. ಜ್ಞಾನಧಾರ ಶಿಶುವಿಹಾರದ ನಿರ್ದೇಶಕಿ ಶಾರದ ಮಹಾಬಲ ರೈ, ಶಿಕ್ಷಕಿಯರಾದ ಸುಜೀತ, ವೀಸ್ಮಾ, ಸಿಬ್ಬಂದಿ ಮಂಜುಳ, ಪೋಷಕರು ಇದ್ದರು.

ಗೋಣಿಕೊಪ್ಪಲು: ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ವಿವಿಧ ಕ್ರೀಡಾ ಪಂದ್ಯಾವಳಿಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಸರ್ಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ವೇಣುಗೋಪಾಲ್ ಉಪಸ್ಥಿತರಿದ್ದು ಮಾತನಾಡಿದರು. ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ಅಕ್ರಂ ಎಂ.ಆರ್. ಸ್ವಾಗತಿಸಿದರೆ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ತಿರುಮಲಯ್ಯ ಎಸ್.ಆರ್. ಅವರು ವಂದಿಸಿದರು.