ಮಡಿಕೇರಿ, ನ. 15: ಗದ್ದೆ, ತೋಡುಗಳ ಬದಿ ಕಾಣಸಿಗುವ ಕೆಸ, ತೆರಮೆ ಸೊಪ್ಪು, ಎಲೆ ಸಂಬಾರ ಸೊಪ್ಪು, ಕಣಿಲೆ, ಸೀಮೆಬದನೆ, ಒಣಗಿಸಿದ ಅವರೆಕಾಳು, ಉಪ್ಪಿಗೆ ಹಾಕಿದ ಮಾವಿನ ಕಾಯಿ, ತರಕಾರಿಗಳು, ಸಿರಿಧಾನ್ಯಗಳು, ಹೀಗೆ ತರಾವರಿ ಬಗೆ ಬಗೆಯ ತಿನಿಸುಗಳೊಂದಿಗೆ ಸಂತ್ರಸ್ತ ಮಹಿಳೆಯರು ಉತ್ಪಾದಿಸಿದ ಮಸಾಲೆ ಪುಡಿಗಳು, ವಿಧ ವಿಧದ ವಸ್ತುಗಳು ಇಲ್ಲಿ ಕಣ್ಮನ ಸೆಳೆಯುತ್ತವೆ. ಮಹಿಳೆಯರೇ ಉತ್ಪಾದಿಸಿ, ತಯಾರಿಸಿದ ಹಾಗೂ ಖರೀದಿಸಿ ತಂದಿರುವ ವಸ್ತುಗಳ ಮಾರಾಟ ಹಾಗೂ ಪ್ರದರ್ಶನ ಮೇಳದಲ್ಲಿ ಇವೆಲ್ಲವೂ ಅಗ್ಗದ ದರದಲ್ಲಿ ಲಭ್ಯವಿದೆ.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸ್ತ್ರೀಶಕ್ತಿ ಸಂಘದವರೇ ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇಲ್ಲಿನ ಬಾಲಭವನದಲ್ಲಿ ಆಯೋಜಿತವಾಗಿದ್ದು, ಹಳ್ಳಿಗಾಡಿನ ತರಕಾರಿ, ತಿನಿಸುಗಳು ಗಮನ ಸೆಳೆಯುತ್ತಿವೆ. ನಾಡಿನಲ್ಲಿ ದೊರಕುವ ತರಕಾರಿ, ಸೊಪ್ಪುಗಳು, ಬಾಳೆಕಾಯಿ, ಕಹಿಹುಳಿ, ಜೋಳ ಸೇರಿದಂತೆ ಹಲವು ಬಗೆಯ ವಸ್ತುಗಳಿವೆ. ಇದರೊಂದಿಗೆ ಹೊಸ ಜಿ.ಪಂ. ಕಟ್ಟಡದಲ್ಲಿ ತಂಗಿರುವ ಸಂತ್ರಸ್ತರಿಂದ ತಯಾರಿಸಲಾದ ಮ್ಯಾಟ್, ಬಳೆ, ಕಿವಿ ವಾಲೆಗಳು, ಬಣ್ಣದ ಬ್ಯಾಗ್‍ಗಳು, ಹೂ ಕುಂಡಗಳು ಗಮನ ಸೆಳೆಯುತ್ತಿವೆ. ಅಷ್ಟೇ ಅಲ್ಲದೆ ಕೆಲ ಸ್ತ್ರೀಶಕ್ತಿ ಗುಂಪುಗಳು ಖರೀದಿ ಮಾಡಿ ಮಾರಾಟಕ್ಕಿಟ್ಟಿರುವ ಬಟ್ಟೆ - ಬರೆ, ಆಹಾರ ಸಾಮಗ್ರಿಗಳು, ಸೋಪು, ಪೇಸ್ಟ್, ಸಿರಿಧಾನ್ಯಗಳು, ಉಪ್ಪಿನಕಾಡಿ, ಇನ್ನಿತರ ಸಾಮಗ್ರಿಗಳು ಅಗ್ಗದ ದರದಲ್ಲಿ ಸಿಗುತ್ತಿದೆ.

ಕೂರ್ಗ್ ಮಸಾಲ

ಭಾರತೀಯ ವಿದ್ಯಾಭವನ, ಪ್ರಾಜೆಕ್ಟ್ ಕೂರ್ಗ್ ಸಂಸ್ಥೆ ಮೂಲಕ ಕಾಲೂರಿನ ಸಂತ್ರಸ್ತರಿಂದ ತಯಾರಿಸಲ್ಪಟ್ಟ ‘ಕೂರ್ಗ್ ಫ್ಲೇವರ್’ ಹೆಸರಿನ ಎಲ್ಲ ಬಗೆಯ ಮಸಾಲೆ ಪುಡಿಗಳು, ಉಪ್ಪಿನಕಾಯಿಗಳು ಕೂಡ ಇಲ್ಲಿ ಲಭ್ಯವಿದೆ. ಮಹಿಳೆಯರ ಅಭ್ಯುದಯಕ್ಕಾಗಿ ಹಮ್ಮಿಕೊಳ್ಳಲಾಗಿರುವ ಈ ಮೇಳದ ಸದುಪಯೋಗಪಡಿಸಿಕೊಂಡು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಾರ್ವಜನಿಕರು ನೆರವಾಗಬಹುದಾಗಿದೆ.

ಅಧಿಕೃತ ಚಾಲನೆ

ಪ್ರದರ್ಶನ ಮೇಳ ನಿನ್ನೆಯಿಂದ ಆರಂಭಗೊಂಡಿದ್ದರೂ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಚಾಲನೆ ನೀಡಿದರು. ಈ ಸಂದರ್ಭ ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ಇಲಾಖೆ ಉಪನಿರ್ದೇಶಕ ಮಲ್ಲೇಸ್ವಾಮಿ, ಕಡಗದಾಳು ಗ್ರಾ.ಪಂ. ಸದಸ್ಯ ಮಾದೇಟಿರ ತಿಮ್ಮಯ್ಯ, ಶಿಶು ಅಭಿವೃದ್ಧಿ ಅಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಕವಿತ ಇನ್ನಿತರರಿದ್ದರು. ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳನ್ನು ಖರೀದಿಸಿ ಅವರುಗಳ ಸ್ವಾವಲಂಬಿ ಬದುಕಿಗೆ ನೆರವಾಗುವಂತೆ ಅತಿಥಿಗಳು ಕೋರಿದರು. ಇದೇ ಸಂದರ್ಭ ಶಾಸ್ತ್ರಿನಗರ ಸ್ತ್ರೀ ಶಕ್ತಿ ಒಕ್ಕೂಟದ ಪ್ರತಿನಿಧಿ ಪ್ರಮೀಳ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಐಎಎಸ್ ಅಧಿಕಾರಿಗಳು ಸಂಗ್ರಹಿಸಿ ನೀಡಲಾದ ಹಣದಲ್ಲಿ ಅಂಗನವಾಡಿಗಳಿಗೆ ಆಟಿಕೆಗಳನ್ನು ನೀಡಲಾಯಿತು. ಮಹಿಳಾ ಒಕ್ಕೂಟದ ಇಂದಿರಾ ನಿರೂಪಿಸಿದರು. - ಸಂತೋಷ್