ಕುಶಾಲನಗರ, ನ. 15: ಕುಶಾಲನಗರ ಶ್ರೀ ಗಣಪತಿ ದೇವಾಲಯ ವಾರ್ಷಿಕೋತ್ಸವದ ಅಂಗವಾಗಿ ದನಗಳ ಜಾತ್ರೆಯ ಪೂರ್ವಭಾವಿ ಸಭೆ ನಡೆಯಿತು. ದೇವಾಲಯ ಸಮಿತಿ ವಿ.ಎನ್. ವಸಂತಕುಮಾರ್ ಅಧ್ಯಕ್ಷತೆಯಲ್ಲಿ ವಾಸವಿ ಮಹಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ರೈತರೊಂದಿಗೆ ದನಗಳ ಜಾತ್ರೆ ಬಗ್ಗೆ ಚರ್ಚೆ ನಡೆಯಿತು.ಜಾತ್ರೆ ಕಾರ್ಯಕ್ರಮದ ರೂಪುರೇಷೆ, ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಕುರಿತಾಗಿ ಸಭೆಯಲ್ಲಿ ರೈತರಿಗೆ ಮಾಹಿತಿ ಒದಗಿಸಲಾಯಿತು. ದನಗಳ ಜಾತ್ರೆ ಯಶಸ್ಸಿಗೆ ರೈತರು ತಮ್ಮ ಸಲಹೆಗಳು ಅಭಿಪ್ರಾಯಗಳನ್ನು ಸಮಿತಿ ಪ್ರಮುಖರಿಗೆ ನೀಡಿದರು. ಮೂರು ದಿನಗಳ ಕಾಲ ನಡೆಯುವ ದನಗಳ ಜಾತ್ರೆಯಲ್ಲಿ ಎರಡು ದಿನಗಳ ಕಾಲ ಎತ್ತು, ಹೋರಿಗಳನ್ನು ಪ್ರದರ್ಶಿಸಿ ಕೊನೆಯ ದಿನ ಸಿಂಧಿ ಮತ್ತಿತರ ಹಸುಗಳನ್ನು ಪ್ರದರ್ಶಿಸುವ ಕುರಿತು ರೈತರು ಅಭಿಪ್ರಾಯ ತಿಳಿಸಿದರು. ಪ್ರತಿ ವರ್ಷ ಪಶು ವೈದ್ಯರ ಮೂಲಕ ಉತ್ತಮ ತಳಿಗಳ ಆಯ್ಕೆ ನಡೆಯುತ್ತಿದೆ. ಇದರೊಂದಿಗೆ ನುರಿತ ರೈತರು ಕೂಡ ಆಯ್ಕೆ ಪ್ರಕ್ರಿಯೆಯಲ್ಲಿ ವೈದ್ಯರೊಂದಿಗೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವಂತೆ ರೈತರು ಮನವಿ ಮಾಡಿದರು. ದನಗಳ ಜಾತ್ರೆ ಆರಂಭಕ್ಕೂ ಮುನ್ನಾ ರಾಸುಗಳನ್ನು ಪಟ್ಟಣದಿಂದ ಮೆರವಣಿಗೆ ಮೂಲಕ ಜಾತ್ರಾ ಮೈದಾನಕ್ಕೆ ಕರೆದೊಯ್ಯುವ ಬಗ್ಗೆ ರೈತರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಗೊಂದಿಬಸವನಹಳ್ಳಿ, ಕೂಡ್ಲೂರು, ಕೂಡುಮಂಗಳೂರು, ಹುಲುಸೆ, ಕಣಿವೆ, ಗೊಂದಿಬಸವನ ಹಳ್ಳಿ, ಮರೂರು, ಆವರ್ತಿ ಸೇರಿದಂತೆ ವಿವಿಧೆಡೆಯ 20 ಕ್ಕೂ ಅಧಿಕ ರೈತರು ಪಾಲ್ಗೊಂಡಿದ್ದರು.

ದೇವಾಲಯ ಸಮಿತಿಯ ಸಹ ಕಾರ್ಯದರ್ಶಿ ಬಿ.ಕೆ. ಮುತ್ತಣ್ಣ, ಪ್ರಮುಖರಾದ ಅಪ್ಪಣ್ಣ, ಜಾತ್ರಾ ಉಪ ಸಮಿತಿಗಳ ಪ್ರಮುಖರಾದ ಅಮೃತ್‍ರಾಜ್, ಲೋಕೇಶ್ ಸಾಗರ್ ಮತ್ತಿತರರು ಇದ್ದರು.