ಸೋಮವಾರಪೇಟೆ,ನ.14: ತಾಲೂಕಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪುನರ್‍ವಸತಿ ಕಲ್ಪಿಸಲು ಈಗಾಗಲೇ ಮಾದಾಪುರದಲ್ಲಿ ಜಾಗ ಗುರುತಿಸಲಾಗಿದ್ದು, ತಕ್ಷಣ ಕಂದಾಯ ಇಲಾಖೆ ಕಾರ್ಯೋನ್ಮುಖ ವಾಗಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ತಾಲೂಕು ತಹಶೀಲ್ದಾರ್‍ಗೆ ಸೂಚನೆ ನೀಡಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂತ್ರಸ್ತರಿಗೆ ನಿವೇಶನದೊಂದಿಗೆ ಮನೆ ನಿರ್ಮಿಸಿಕೊಡಲು ಮಾದಾಪುರದ ತೋಟಗಾರಿಕಾ ಇಲಾಖೆಗೆ ಸೇರಿದ ಜಾಗದಲ್ಲಿ 55 ಏಕರೆ ಪ್ರದೇಶವನ್ನು ಗುರುತಿಸಲಾಗಿದ್ದು, ತಕ್ಷಣ ಕಂದಾಯ ಇಲಾಖೆ ಜಾಗವನ್ನು ಸರ್ವೆ ನಡೆಸಿ, ನಿವೇಶನಗಳನ್ನಾಗಿ ಪರಿವರ್ತಿಸಲು ಕ್ರಮ ವಹಿಸಬೇಕು ಎಂದು ತಹಶೀಲ್ದಾರ್ ಮಹೇಶ್ ಅವರಿಗೆ ಸೂಚಿಸಿದರು.
ಒತ್ತುವರಿ ತೆರವುಗೊಳಿಸಿ: ಮಾದಾಪುರದ ತೋಟಗಾರಿಕಾ ಇಲಾಖೆಗೆ ಸೇರಿದ ಜಾಗದಲ್ಲಿ ಸುಮಾರು 7 ಎಕರೆ ಜಾಗವನ್ನು ಸ್ಥಳೀಯ ವ್ಯಕ್ತಿಯೋರ್ವರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಅಧಿಕಾರಿ ಶೋಭ ಅವರು ಸಭೆಯ ಗಮನ ಸೆಳೆದ ಸಂದರ್ಭ, ಮುಂದಿನ ಬುಧವಾರ ಸ್ಥಳ ಪರಿಶೀಲನೆ ನಡೆಸಿ, ಒತ್ತುವರಿ ತೆರವುಗೊಳಿಸುವಂತೆ ಶಾಸಕರು ನಿರ್ದೇಶನ ನೀಡಿದರು.
ಗಾಂಜಾಕ್ಕೆ ಕಡಿವಾಣ ಹಾಕಿ: ತಾಲೂಕಿನಾದ್ಯಂತ ಅಕ್ರಮ ಗಾಂಜಾ ಮಾರಾಟ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿಲ್ಲ. ಇದರಿಂದಾಗಿ ಕಾಲೇಜು ವಿದ್ಯಾರ್ಥಿ ಗಳು, ಯುವ ಜನಾಂಗ ಹಾದಿ ತಪ್ಪುತ್ತಿದ್ದಾರೆ. ಯಾವದೇ ಮುಲಾಜಿಗೆ ಒಳಗಾಗದೇ ಗಾಂಜಾ ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಶಾಸಕ ರಂಜನ್ ಅವರು ಪೊಲೀಸ್ ಇಲಾಖೆಗೆ ತಾಕೀತು ಮಾಡಿದರು.
ಸೋಮವಾರಪೇಟೆ, ಮಾದಾಪುರ, ಸುಂಟಿಕೊಪ್ಪ, ಶನಿವಾರಸಂತೆ, ಕುಶಾಲನಗರದಲ್ಲಿ ಗಾಂಜಾ ಹಾವಳಿ ಮಿತಿಮೀರಿದ್ದು, ಪಟ್ಟಣದ ಸುತ್ತಮುತ್ತಲ ಗ್ರಾಮಗಳಲ್ಲಿ ಗಾಂಜಾ ವ್ಯಸನಿಗಳು ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿದ್ದಾರೆ. ಸುಂಟಿಕೊಪ್ಪದಲ್ಲಿ ಆಗಾಗ್ಗೆ ಅಹಿತಕರ ಘಟನೆ ನಡೆಯಲು ಗಾಂಜಾ ಕಾರಣವಾಗಿದೆ. ಆದರೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿಲ್ಲ ಎಂದು ರಂಜನ್ ಅಸಮಾಧಾನ ವ್ಯಕ್ತಪಡಿಸಿದರು.
ಬಜೆಗುಂಡಿ ಗ್ರಾಮದ ಸುರೇಶ್ ಎಂಬಾತನ ಮನೆಯಲ್ಲಿ ಧಾಳಿ ನಡೆಸಿದ ಸಂದರ್ಭ 1ಲಕ್ಷ ಮೌಲ್ಯದ ಶ್ರೀಗಂಧ ಪತ್ತೆಯಾಗಿದೆ. ಗಾಂಜಾ ದೊರಕಿಲ್ಲ ಎಂದು ವೃತ್ತನಿರೀಕ್ಷಕ ನಂಜುಂಡೇಗೌಡ ಸಭೆಯಲ್ಲಿ ತಿಳಿಸಿದರು. ‘ಗಾಂಜಾ ಮಾರಾಟ ಮಾಡುವವನ ಫೋಟೋ ನನಗೆ ತಲುಪಿದೆ. ನಿಮಗೆ ಗೊತ್ತಿಲ್ಲ ಅಂದ್ರೆ ಹೇಗೆ? ಗಾಂಜಾ ವ್ಯಸನಿಗಳನ್ನು ಎಳೆತಂದು ಬಾಯಿಬಿಡಿಸಿದರೆ ಎಲ್ಲವೂ ಗೊತ್ತಾಗುತ್ತೆ. ಮೊದಲು ಆ ಕೆಲಸ ಮಾಡಿ’ ಎಂದು ತಾಕೀತು ಮಾಡಿದರು. ರಿಕ್ರಿಯೇಷನ್ ಹೆಸರಿನಲ್ಲಿ ಕೆಲ ಕ್ಲಬ್‍ಗಳು ಅಕ್ರಮ ಇಸ್ಪೀಟ್ ಅಡ್ಡೆಗಳಾಗಿವೆ. ಇಲ್ಲಿನ ಜೂನಿಯರ್ ಕಾಲೇಜು ಆವರಣದಲ್ಲಿ ಸಂಜೆ ಹಾಗೂ ರಾತ್ರಿ ಪುಂಡರ ಹಾವಳಿ ಹೆಚ್ಚುತ್ತಿದೆ. ನೈಟ್‍ಬೀಟ್ ಹೆಚ್ಚಿಸಿ ಎಂದು ಸೂಚಿಸಿದರು.
ವರದಿ ನೀಡಲು ಸೂಚನೆ: ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾದ ರಸ್ತೆ, ಖಾಸಗಿ ಸ್ಥಳ, ಸರ್ಕಾರಿ ಸ್ವತ್ತುಗಳು, ಸೇತುವೆ, ತಡೆಗೋಡೆಗಳ ಬಗ್ಗೆ ಸರ್ವೆ ನಡೆಸಬೇಕು. ನೂತನವಾಗಿ ಕ್ರಿಯಾಯೋಜನೆ ತಯಾರಿಸಿ ತನಗೆ ಸಲ್ಲಿಸುವಂತೆ ಜಿ.ಪಂ. ಅಭಿಯಂತರ ಶಿವಕುಮಾರ್ ಅವರಿಗೆ ಶಾಸಕ ರಂಜನ್ ನಿರ್ದೇಶನ ನೀಡಿದರು.
ಕೇಂದ್ರದ ಎನ್‍ಡಿಆರ್‍ಎಫ್‍ನಿಂದ 85 ಕೋಟಿ ಸೇರಿದಂತೆ ರಾಜ್ಯದಿಂದ 30 ಕೋಟಿ ಮಾತ್ರ ಪರಿಹಾರ ಬಿಡುಗಡೆಯಾಗಿದೆ. ಇದು ಯಾವದಕ್ಕೂ ಸಾಕಾಗುವದಿಲ್ಲ. ಈ ಹಿನ್ನೆಲೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವದು. ತಕ್ಷಣ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಿದರು.
ಜಿ.ಪಂ.ಗೆ ಸಂಬಂಧಿಸಿದಂತೆ 96 ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ 200 ಕೋಟಿ ಹಾನಿಯಾಗಿರುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಸ್ತೆಗಳ ಗುಂಡಿ ಮುಚ್ಚಲು 1.40 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಿವಕುಮಾರ್ ಹೇಳಿದರು.
ವೈದ್ಯರ ವಿರುದ್ಧ ಗರಂ: ಮಾದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಸಾರ್ವಜನಿಕ ರೋಗಿಗಳೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ತಮ್ಮ ವಸತಿ ಗೃಹವನ್ನೇ ಕ್ಲಿನಿಕ್ ಆಗಿ ಪರಿವರ್ತಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಔಷಧಿಗಳು ಲಭ್ಯವಿಲ್ಲ ಎಂದು ಹೇಳುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಹೇಳಿದರು.
ಕೇಂದ್ರದಿಂದ 1 ಕೋಟಿಗೂ ಅಧಿಕ ಮೌಲ್ಯದ ಔಷಧಿಗಳು ಜಿಲ್ಲೆಗೆ ಸರಬರಾಜಾಗಿವೆ. ಔಷಧಿಗಳ ಕೊರತೆ ಇಲ್ಲ. ವೈದ್ಯರು ತಮ್ಮ ನಡವಳಿಕೆ ಬದಲಾಯಿಸಿಕೊಳ್ಳದಿದ್ದಲ್ಲಿ ತಕ್ಷಣ ವರ್ಗಾವಣೆ ಮಾಡಿ ಎಂದು ತಾಲೂಕು ಆರೋಗ್ಯಾಧಿಕಾರಿ ರವಿಕುಮಾರ್ ಅವರಿಗೆ ಶಾಸಕರು ಸೂಚಿಸಿದರು.
ವಸೂಲಾತಿ ಮಾಡಿದರೆ ಕ್ರಮ: ತಾಲೂಕು ಉಪ ನೋಂದಣಾಧಿಕಾರಿ ಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊರಗುತ್ತಿಗೆ ನೌಕರರೋರ್ವರು ತನ್ನಿಂದಲೇ ಲಂಚ ಕೇಳಿದ್ದಾರೆ. ಉಪ ನೋಂದಣಾಧಿಕಾರಿ ಗಳ ಕಚೇರಿ ವಸೂಲಾತಿ ಕೇಂದ್ರವಾಗಿದೆ. ಇದು ಮುಂದುವರೆ ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ರಂಜನ್ ಎಚ್ಚರಿಸಿದರು. ಮಹಿಳೆಯನ್ನು ಈಗಾಗಲೇ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಅಧಿಕಾರಿ ಪ್ರವೀಣ್ ತಿಳಿಸಿದರು.
ಕಚೇರಿ ಸಿಬ್ಬಂದಿಗಳೇ ಕಮಿಷನ್ ಏಜೆಂಟ್‍ಗಳಾಗಿದ್ದಾರೆ. ವಸೂಲಿ ಕೇಂದ್ರವನ್ನಾಗಿ ಮಾಡಿಕೊಂಡಿರುವ ಉಪನೋಂದಣಾಧಿಕಾರಿಯನ್ನು ಇಲ್ಲಿಂದ ವರ್ಗಾವಣೆ ಮಾಡಲು ನಿರ್ಣಯ ಕೈಗೊಳ್ಳಿ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸಮರ್ಪಕವಾಗಿ ಕೆಲಸ ಮಾಡಿ ಕೊಡಿ ಎಂದು ರಂಜನ್ ನಿರ್ದೇಶನ ನೀಡಿದರು.
1349 ಪರಿಹಾರ ವಿತರಣೆ: ಅತೀವೃಷ್ಟಿಯಿಂದ ತಾಲೂಕಿನಲ್ಲಿ 88 ಮನೆಗಳು ಪೂರ್ಣಹಾನಿಯಾಗಿದ್ದು, 288 ಮನೆಗಳು ತೀವ್ರಹಾನಿ, 973 ಮನೆಗಳು ಭಾಗಶಃ ಹಾನಿಗೀಡಾಗಿವೆ. 2 ಮಾನವ ಹಾನಿ, 34 ಜಾನುವಾರು ಹಾನಿ ಸಂಭವಿಸಿದ್ದು, ಇದುವರೆಗೆ ಒಟ್ಟು 1349 ಪ್ರಕರಣಗಳಿಗೆ ಪರಿಹಾರ ವಿತರಿಸಲಾಗಿದೆ ಎಂದು ತಹಶೀಲ್ದಾರ್ ಮಹೇಶ್ ಸಭೆಗೆ ತಿಳಿಸಿದರು.
ಕೃಷಿ ಇಲಾಖೆಯಿಂದ ನಡೆಸುತ್ತಿರುವ ಮಣ್ಣು ಪರೀಕ್ಷೆಯ ಪ್ರಗತಿವಾರು ವರದಿಯನ್ನು ಪ್ರತಿ ತಿಂಗಳು ತಮ್ಮ ಕಚೇರಿಗೆ ಸಲ್ಲಿಸಬೇಕು. ಪ್ರಕೃತಿ ವಿಕೋಪ ಹಿನ್ನೆಲೆ ಹೆಚ್ಚುವರಿ ಪಂಪ್‍ಸೆಟ್, ಕೃಷಿ ಹೊಂಡಕ್ಕೆ ಅನುದಾನ ಕಲ್ಪಿಸಲು ಕೋರಿ ಸರ್ಕಾರಕ್ಕೆ ಪತ್ರ ಬರೆಯಿರಿ. ತಾನು ಸಂಬಂಧಿಸಿದ ಕೃಷಿ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಶಾಸಕರು, ಕೃಷಿ ಇಲಾಖಾ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ಅವರಿಗೆ ಸೂಚಿಸಿದರು.
ವಿದ್ಯುತ್ ಒದಗಿಸಲು ಸೂಚನೆ: ತಾಲೂಕಿನ ಕಲ್ಲಡಿ, ಹಟ್ಟಿಹೊಳೆ, ಗರಗಂದೂರು ಭಾಗದಲ್ಲಿ ಇಂದಿಗೂ ಸಮರ್ಪಕ ವಿದ್ಯುತ್ ಕಲ್ಪಿಸಿಲ್ಲ. ಮುಂದಿನ 2 ದಿನಗಳ ಒಳಗೆ ವಿದ್ಯುತ್ ಕಲ್ಪಿಸಲು ಕ್ರಮವಹಿಸುವಂತೆ ಅಭಿಯಂತರ ಅಶೋಕ್ ಅವರಿಗೆ ನಿರ್ದೇಶನ ನೀಡಿದರು. ಸೌಭಾಗ್ಯ ಯೋಜನೆಯಡಿ 554 ಅರ್ಜಿಗಳು ಸಲ್ಲಿಕೆಯಾಗಿದ್ದು, ಹಾನಗಲ್ಲು ಬಾಣೆಯಲ್ಲಿ ಉಪ ಕೇಂದ್ರದ ಕಚೇರಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಟ್ಟಣ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಡಿಸೆಂಬರ್ ಅಂತ್ಯದೊಳಗೆ ಕ್ರಮವಹಿಸಬೇಕು ಎಂದು ಶಾಸಕರು ನಿರ್ದೇಶಿಸಿದರು. ಯಂತ್ರ ಖರೀದಿಗೆ ಟೆಂಡರ್ ಕರೆಯಲು ಕ್ರಮ ವಹಿಸಲಾಗಿದೆ ಎಂದು ಪ.ಪಂ.ನ ರಫೀಕ್ ತಿಳಿಸಿದರು.
ಗುಡ್ಡೆಹೊಸೂರು ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರ ವಾಗಿದ್ದು, ಆನೆಕಂದಕಕ್ಕೆ ತಡೆಯಾಗಿ ರುವ ಕಲ್ಲುಬಂಡೆಗಳನ್ನು ತೆರವುಗೊಳಿಸಿ ಎಂದು ಅಧಿಕಾರಿಗೆ ಸೂಚಿಸಿದರು. ತಾಲೂಕಿನ 60 ಗ್ರಾಮಗಳಲ್ಲಿ ಶೇ.33ಕ್ಕಿಂತ ಅಧಿಕ ಕಾಫಿ ನಷ್ಟವಾಗಿ ರುವ ಬಗ್ಗೆ ವರದಿ ತಯಾರಿಸಲಾಗಿದೆ ಎಂದು ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್ ತಿಳಿಸಿದರು.
ಲೋಕೋಪಯೋಗಿ ಇಲಾಖಾ ರಸ್ತೆಯ ಬದಿಯಲ್ಲಿ ಗ್ರಾ.ಪಂ.ನಿಂದ ಕುಡಿಯುವ ನೀರಿನ ಪೈಪ್‍ಲೈನ್ ಅಳವಡಿಸಿದ್ದು, ರಸ್ತೆಯ ದುರಸ್ತಿ ಹಾಗೂ ಅಗಲೀಕರಣ ಕಾಮಗಾರಿಗೆ ತಡೆಯಾಗಿದೆ. ಬದಲಿ ಪೈಪ್‍ಲೈನ್ ಅಳವಡಿಸಲು ಗ್ರಾ.ಪಂ.ಗಳಿಗೆ ಸೂಚಿಸಬೇಕೆಂದು ಅಭಿಯಂತರ ರಮಣಗೌಡ ಸಭೆಯಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ, ಕಾರ್ಯನಿರ್ವಹಣಾಧಿಕಾರಿ ಸುನಿಲ್, ತಹಶೀಲ್ದಾರ್ ಮಹೇಶ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.