ಸಿದ್ದಾಪುರ, ನ. 14: ಇತ್ತೀಚಿಗೆ ಗೋಣಿಕೊಪ್ಪಲುವಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಅಂಕಣಕಾರ ಸಂತೋಷ್ ತಮ್ಮಯ್ಯ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ, ಪಾಲಿಬೆಟ್ಟದಲ್ಲಿ ವಿವಿಧ ಮುಸ್ಲಿಂ ಯುವಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.
ಪ್ರತಿಭಟನಾ ಸಭೆ ಪಾಲಿಬೆಟ್ಟ ಬಸ್ ನಿಲ್ದಾಣದಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮೂರ್ನಾಡುವಿನ ಮುನೀರ್ ಪೈಝಿ ಮಾತನಾಡಿ, ಪ್ರವಾದಿಯವರ ಕುರಿತು ಸತ್ಯಕ್ಕೆ ದೂರವಾದ ಹೇಳಿಕೆ ನೀಡಿರುವದು ಖಂಡನೀಯವೆಂದರು. ಪ್ರವಾದಿ ಶಾಂತಿ ಸಂದೇಶವನ್ನು ಸಾರಿದ ಸರ್ವಶ್ರೇಷ್ಠ ಮುಸ್ಲಿಂ ಧರ್ಮಗುರು ಗಳಾಗಿದ್ದಾರೆ. ಇಂತ ಗುರುಗಳ ವಿರುದ್ಧ ಅವಹೇಳನಕಾರಿಯಾಗಿ ಮಾತ ನಾಡಿರುವ ಸಂತೋಷ್ ತಮ್ಮಯ್ಯ ಕೂಡಲೇ ತಪ್ಪಿತಸ್ಥರು ಕ್ಷಮೆಯಾ ಚಿಸಬೇಕೆಂದು ಒತ್ತಾಯಿಸಿದರು. ಸಿದ್ದಾಪುರದ ಸಾಮಾಜಿಕ ಕಾರ್ಯಕರ್ತ ಮುಸ್ತಫ ಮಾತನಾಡಿ, ಕೊಡಗು ಜಿಲ್ಲೆ ಶಾಂತ ಪ್ರಿಯ ಜಿಲ್ಲೆಯಾಗಿದ್ದು, ಸೌಹಾರ್ದತೆಗೆ ದಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿ ಶಾಂತಿ ಕದಡುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪೈಜಲ್, ಆಬಿದ್ ಹಾಗೂ ವಿವಿಧೆಡೆಯಿಂದ ಮುಸ್ಲಿಂ ಸಂಘಟನೆಗಳ ಮುಖಂಡರುಗಳು,ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪೊನ್ನಂಪೇಟೆ: ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ತತ್ವ ಮತ್ತು ಆದರ್ಶಗಳನ್ನು ಅರಿತುಕೊಂಡವರು ಯಾವದೇ ಧರ್ಮದವರಾಗಲಿ ಅವರನ್ನು ಎಂದಿಗೂ ಅವಮಾನಿಸುವ ಕೆಲಸ ಮಾಡುವದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.), ಇತ್ತೀಚೆಗೆ ಗೋಣಿಕೊಪ್ಪಲಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂತೋಷ್ ತಮ್ಮಯ್ಯ ಹೇಳಿಕೆ ಖಂಡನೀಯ ಎಂದು ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡವ ಮುಸ್ಲಿಂ ಅಸೋಸಿಯೇಷನ್‍ನ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ, ಜಗತ್ತಿನ ನಾಗರಿಕ ಪರಂಪರೆಗೆ ಪ್ರವಾದಿ ಮೊಹಮ್ಮದ್ ಅವರ ಕೊಡುಗೆ ಅಪಾರವಾದದ್ದು. ಅವರು ಮರಣ ಹೊಂದಿ 14 ಶತಮಾನ ಕಳೆದಿದ್ದರೂ ಇಂದಿಗೂ ಅವರ ತತ್ವ ಮತ್ತು ಆದರ್ಶಗಳು ಜೀವಂತವಾಗಿವೆ. ಪರಿಶುದ್ಧ ಪರಂಪರೆಯ ಬದುಕಿಗೆ ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.
ಕೆ.ಎಂ.ಎ.ಯ ಹಿರಿಯ ಸಲಹೆಗಾರ ಮತ್ತು ಧಾರ್ಮಿಕ ವಿಧ್ವಾಂಸ ಪಾಯಡತಂಡ ಎಂ. ಹುಸೈನ್ ಮುಸ್ಲಿಯಾರ್ ಅವರು ಮಾತನಾಡಿ, ಪ್ರವಾದಿ ಅವರ ಕುರಿತು ವ್ಯಕ್ತಿಯೊಬ್ಬ ಅವಹೇಳನಕಾರಿಯಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ಅದನ್ನು ಖಂಡಿಸಿ ಜಿಲ್ಲಾದ್ಯಂತ ಪ್ರತಿಭಟನೆಗಳು ದಿನನಿತ್ಯ ನಡೆಯು ತ್ತಿದ್ದರೂ, ಆ ವ್ಯಕ್ತಿ ತನ್ನ ಹೇಳಿಕೆ ಕುರಿತು ಇಂದಿಗೂ ಯಾವದೇ ಸ್ಪಷ್ಟೀಕರಣ ನೀಡಿಲ್ಲ. ಇದು ತೀರಾ ಖಂಡನೀಯ ಎಂದರು.
ಗೋಷ್ಠಿಯಲ್ಲಿ ಕೆ.ಎಂ.ಎ. ಉಪಾಧ್ಯಕ್ಷರಾದ ಆಲೀರ ಎ. ಅಹಮದ್ ಹಾಜಿ, ಡಾ. ಜೋಯಿಪೆರೆ ಎ. ಕುಂಞಬ್ದುಲ್ಲಾ, ನಿರ್ದೇಶಕ ಚಿಮ್ಮಿಚ್ಚೀರ ಕೆ. ಇಬ್ರಾಹಿಂ (ಉಮ್ಣಿ), ಪುದಿಯತ್ತಂಡ ಹೆಚ್. ಷಂಶುದ್ದೀನ್, ಸಹ ಕಾರ್ಯದರ್ಶಿ ಮಂಡೇಂಡ ಎ. ಮೊಯ್ದು ಅವರು ಉಪಸ್ಥಿತರಿದ್ದರು.
ವೀರಾಜಪೇಟೆಯಲ್ಲಿ ಪ್ರತಿಭಟನೆ
ಗೋಣಿಕೊಪ್ಪಲುವಿನಲ್ಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ದಿನಪತ್ರಿಕೆಯ ಅಂಕಣಕಾರ ಸಂತೋಷ್ ತಮ್ಮಯ್ಯ ಎಂಬವರು ಮುಸ್ಲಿಂ ಗುರು ಪ್ರವಾದಿಯವರ ಬಗ್ಗೆ ಅವಹೇಳನಾಕಾರಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಆರೋಪಿಸಿ ಇಲ್ಲಿನ 2 ಮುಸ್ಲಿಂ ಸಂಘಟನೆಗಳು ಗಡಿಯಾರ ಕಂಬದ ಬಳಿ ನಿನ್ನೆ ದಿನ ಪ್ರತಿಭಟನೆ ನಡೆಸಿದವು.
ಪಟ್ಟಣ ಪಂಚಾಯಿತಿ ಮಾಜೀ ಸದಸ್ಯ ಮೊೈನುದ್ದೀನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಂತೋಷ್ ತಮ್ಮಯ್ಯ ಹೇಳಿಕೆಯನ್ನು ಖಂಡಿಸ ಲಾಯಿತು. ಇದೇ ವಿಷಯವನ್ನು ಮುಂದಿಟ್ಟುಕೊಂಡು ಎಝಾಜ್ ಅಹಮದ್ ನೇತೃತ್ವದಲ್ಲಿ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಸಂದರ್ಭ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮೊೈನುದ್ದೀನ್, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಶುಹೈಬ್, ವೀರಾಜಪೇಟೆ ಎಸ್‍ಎಸ್‍ಎಫ್ ಅಧ್ಯಕ್ಷ ಅಬ್ದುಲ್ ಜಲೀಲ್ ಅಮಿನ್ ಇವರುಗಳು ಮಾತನಾಡಿ, ಕೊಡಗಿನಂತಹ ಸೌಹಾರ್ದಯುತ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನ ಖಂಡನೀಯ. ಕಾವೇರಿ ನೆಲದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಈ ದಿಸೆಯಲ್ಲಿ ಸಂತೋಷ್ ತಮ್ಮಯ್ಯ ಅವರನ್ನು ಬಂಧಿಸಿರುವ ಪೊಲೀಸರ ಕ್ರಮ ಸ್ವಾಗತಾರ್ಹ ಎಂದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಮತೀನ್, ಸಿ.ಕೆ. ಪ್ರಥ್ವಿನಾಥ್, ಪಿ.ಎ. ಶಫಿ, ಕನ್ನಡಿಯಂಡ ಸುಬೇರ್, ನಝೀರ್ ಮತ್ತಿತರರು ಉಪಸ್ಥಿತರಿದ್ದರು. ಎಝಾಜ್ ಪ್ರತಿಭಟನೆ ನಡೆಸಿದ ಸಂದರ್ಭ ಪಟ್ಟಣ ಪಂಚಾಯಿತಿ ಸದಸ್ಯ ಜಲೀಲ್, ಮುಕ್ತಾರ್, ಸಾಬಿತ್, ಷರೀಫ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.