ಮಡಿಕೇರಿ, ನ. 14: ಎಲ್ಲ ಪ್ರಯತ್ನಗಳ ನಡುವೆಯೂ ಮಡಿಕೇರಿ ತಾಲೂಕು ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಗೆ ಅಡಿಪಾಯ ಹಂತದಲ್ಲೇ ಮಂಕು ಕವಿದಿರುವ ವಾತಾವರಣ ಪ್ರಸಕ್ತ ಬೇಸಿಗೆಯಲ್ಲೂ ಮುಂದುವರಿದಿದೆ.ಬಹು ನಿರೀಕ್ಷೆಯ ಈ ಕಟ್ಟಡ ಕಾಮಗಾರಿಗೆ ಕಂದಾಯ ಇಲಾಖೆಯ ನಿರ್ದೇಶನದಂತೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧಿಕಾರಿಗಳ ಉಸ್ತುವಾರಿಯಲ್ಲಿ ಕೆ. ಬಾಲರಾಜ್ ಮತ್ತು ಕಂಪೆನಿ ಗುತ್ತಿಗೆ ಆರಂಭಿಸಿತ್ತು.ನಿವೇಶನದ ಗೊಸರು, ನಿರಂತರ ಜಲಮೂಲ ಸಮಸ್ಯೆ, ಮಳೆಗಾಲದಲ್ಲಿ ಇಡೀ ಪ್ರದೇಶ ಕೆರೆಯಾಗಿ ಪರಿವರ್ತನೆಗೊಂಡ ಪರಿಣಾಮ ಕೆಲಸವು ಮುಂದುವರಿಯಲೇ ಇಲ್ಲ. ಈ ಎಲ್ಲದರ ನಡುವೆ ಇತ್ತೀಚೆಗೆ ಸುಮಾರು 22 ಅಡಿಯಷ್ಟು ಆಳಕ್ಕೆ ನಿವೇಶನದ ಮಣ್ಣು ತೆರವುಗೊಳಿಸ ಲಾಯಿತು. ಆ ಮುಖಾಂತರ ಅಷ್ಟೇ ಆಳದಿಂದ ಕಬ್ಬಿಣದ ಸಲಾಕೆಗಳ ಬಳಕೆಯೊಂದಿಗೆ ಕಟ್ಟಡ ತಜ್ಞರ ಅಭಿಪ್ರಾಯದಂತೆ 20 ಅಡಿ ಕಾಂಕ್ರಿಟ್ ಬಿಡ್‍ನಿಂದ ಕೂಡಿದ ಪಿಲ್ಲರ್ ನಿರ್ಮಿಸುವ ಕೆಲಸ ಕೈಗೊಳ್ಳ ಲಾಯಿತು. ಹೀಗೆ ನಾಲ್ಕು ಅಡಿಯಷ್ಟು ಮೊದಲ ಹಂತದ ಕಾಂಕ್ರಿಟ್ ಬೀವನ್ (ಬಿಡ್) ನಿರ್ಮಿಸುವದ ರೊಂದಿಗೆ ಆ ಹಂತದಲ್ಲಿ ಮಣ್ಣು ತುಂಬಿ
(ಮೊದಲ ಪುಟದಿಂದ) ನಿವೇಶನವನ್ನು ಸಮತಟ್ಟುಗೊಳಿಸಲಾಗಿದೆ. ಗುತ್ತಿಗೆ ಸಂಸ್ಥೆಯ ಪ್ರಕಾರ ತಂತ್ರಜ್ಞರು ನೀಡಿರುವ ಸಲಹೆ ಮೇರೆಗೆ ಇನ್ನು ಸುಮಾರು 16 ಅಡಿಗಳಷ್ಟು ಇದೇ ಮಾದರಿ ಕೆಲಸವನ್ನು ಕೈಗೊಳ್ಳಬೇಕಿದೆ.
ಇಷ್ಟಾದರೂ ನಿವೇಶನದಲ್ಲಿ ಜಲಮೂಲ ಕಾಣಿಸಿಕೊಂಡಿರುವ ಮೇರೆಗೆ ಗುತ್ತಿಗೆದಾರರು ಕಂಗೆಟ್ಟಿದ್ದಾರೆ. ಈ ಎಲ್ಲದರ ನಡುವೆ ನಿನ್ನೆ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಅಧಿಕಾರಿಗಳ ತಂಡ ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣಪ್ಪ ಸಹಿತ ಭೇಟಿ ನೀಡಿ ನಿವೇಶನದ ಪರಿಶೀಲನೆ ನಡೆಸಿದ್ದಾರೆ.
ಆದರೆ ಈ ಅಧಿಕಾರಿಗಳ ತಂಡ ಪರಿಸ್ಥಿತಿ ಬಗ್ಗೆ ಮೌನ ಮುರಿದಂತಿಲ್ಲ; ‘ಶಕ್ತಿ’ ದೂರವಾಣಿ ಮೂಲಕ ಸಂಪರ್ಕಿಸಿ ಎಷ್ಟೇ ಕರೆಗಳನ್ನು ಮಾಡಿದರೂ, ಸ್ವೀಕರಿಸುವ ಸೌಜನ್ಯ ತೋರಿದಂತಿಲ್ಲ. ಬದಲಾಗಿ ಗುತ್ತಿಗೆದಾರರೂ ಕೂಡ ಈ ಅಧಿಕಾರಿಗಳನ್ನು ನೆಚ್ಚಿಕೊಂಡು ಮಿನಿ ವಿಧಾನ ಸೌಧ ಕಾಮಗಾರಿಗೆ ಕೋಟಿಗಟ್ಟಲೆ ಹಣ ವ್ಯಯಿಸಿದ್ದು, ಇದುವರೆಗೆ ವರ್ಷ ಎರಡು ಕಳೆದರೂ ಬಿಡಿಗಾಸು ಹಣ ನೀಡಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಹಲವು ಅಡಚಣೆಗಳ ನಡುವೆ ಅಡಿಪಾಯ ಹಂತದಲ್ಲೇ ನಲುಗಿ ಹೋಗಿರುವ ಮಿನಿ ವಿಧಾನ ಸೌಧದ ಕಟ್ಟಡ ಕಾಮಗಾರಿ ನೆಲ ಹಂತದಿಂದ ಮೇಲೇಳುವ ಯಾವದೇ ಲಕ್ಷಣ ಕಂಡು ಬರುತ್ತಿಲ್ಲ. ಹಣದ ಅಡಚಣೆಯಿಂದ ಗುತ್ತಿಗೆ ಸಂಸ್ಥೆ ಹಾಗೂ ಇಲ್ಲಿನ ತುಂಡು ಗುತ್ತಿಗೆದಾರರು ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದಾರೆ. -ಶ್ರೀಸುತ