ಮಡಿಕೇರಿ, ನ. 14: ಅಂಕಣಕಾರ ಸಂತೋಷ್ ತಮ್ಮಯ್ಯ ಬಂಧನವನ್ನು ಖಂಡಿಸಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ವೀಡೀಯೋ ಹರಿಯಬಿಟ್ಟಿರುವ ನಾಪೋಕ್ಲುವಿನ ಆಸಿಫ್ ಎಂಬಾತನನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂ ಸುರಕ್ಷ ವೇದಿಕೆ ಕರೆ ನೀಡಿದ್ದ ಕೊಡಗು ಬಂದ್‍ಗೆ ನಿರೀಕ್ಷಿತ ಬೆಂಬಲ ವ್ಯಕ್ತಗೊಂಡಿಲ್ಲ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೆಲವೆಡೆ ಹಿಂದೂ ಕಾರ್ಯಕರ್ತರು ಪ್ರತಿಭಟನೆ ಮಾಡಿದರೆ, ದಕ್ಷಿಣ ಕೊಡಗಿನಲ್ಲಿ ಒಂದಿಷ್ಟು ಅಂಗಡಿ - ಮುಂಗಟ್ಟುಗಳು ಮುಚ್ಚಿದ್ದು ಹೊರತುಪಡಿಸಿದರೆ ಗ್ರಾಮೀಣ ಪ್ರದೇಶದಲ್ಲಿ ಯಾವದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.

ಮಡಿಕೇರಿಯಲ್ಲಿ ಜ. ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಟಿಪ್ಪು, ರಾಜ್ಯ ಸರಕಾರ, ಮುಖ್ಯಮಂತ್ರಿ ಹಾಗೂ ಆಸಿಫ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಂತೋಷ್ ತಮ್ಮಯ್ಯ ಅವರನ್ನು ರಾತೋರಾತ್ರಿ ಬಂಧಿಸಿದ ಪೊಲೀಸರು ಸರಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಭಯೋತ್ಪಾದಕರನ್ನು ಬಂಧಿಸುವಂತೆ ರಾತೋರಾತ್ರಿ ಕಾರ್ಯಾಚರಣೆ ಮಾಡಿದ್ದು, ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗುತ್ತಿದೆ. ದಾರ್ಶನಿಕ ಜಯಂತಿಯೊಂದಿಗೆ ಭಯೋತ್ಪಾದಕರ, ಮತಾಂಧರ ಜನ್ಮ ಜಯಂತಿಯನ್ನು ಹೇರಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದವರನ್ನು ಬಂಧಿಸುವ ಕೆಲಸವಾಗುತ್ತಿದ್ದು, ಭಯೋತ್ಪಾದಕರಂತೆ ವರ್ತಿಸುತ್ತಿರುವ ಸಂಘಟನೆಗಳಿಗೆ ಮನ್ನಣೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಆಸಿಫ್‍ನನ್ನು ಬಂಧಿಸುವಂತೆ ಒತ್ತಾಯಿಸಿ ಬಲ್ಲಾರಂಡ ಮಣಿ ಉತ್ತಪ್ಪ ಸ್ಥಳದಲ್ಲಿ ಧರಣಿ ಕುಳಿತರು.

ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆಗಳ ಪ್ರಮುಖರಾದ ಮನು ಮುತ್ತಪ್ಪ, ಬಿ.ಎ. ಹರೀಶ್, ರಾಬಿನ್ ದೇವಯ್ಯ, ರವಿ ಕಾಳಪ್ಪ, ಮಹೇಶ್ ಜೈನಿ, ಚೇತನ್, ಮನು ಮಹೇಶ್, ಅನಿತಾ ಪೂವಯ್ಯ, ಮಿನಾಜ್ ಪ್ರವೀಣ್, ಸವಿತಾ ರಾಖೇಸ್, ಸತ್ಯ, ಎಂ.ಕೆ. ಜಯಕುಮಾರ್, ಉಮೇಶ್ ಸುಬ್ರಮಣಿ, ಮೇದಪ್ಪ, ವಿನಯ್, ಪ್ರಸನ್ನಭಟ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ನಾಪೆÇೀಕ್ಲುವಿನಲ್ಲಿ ವಿಫಲ

ಅಂಕಣಕಾರ ಸಂತೋಷ್ ತಮ್ಮಯ್ಯ ಅವರ ಬಂಧನವನ್ನು ಖಂಡಿಸಿ ಮಧ್ಯಾಹ್ನ 12ರಿಂದ 1 ಗಂಟೆಯವರೆಗೆ ಹಿಂದು ಸುರಕ್ಷಾ ವೇದಿಕೆ ಕರೆದಿದ್ದ ಕೊಡಗು ಬಂದ್ ನಾಪೆÇೀಕ್ಲುವಿನಲ್ಲಿ ವಿಫಲತೆ ಕಂಡಿದೆ.

ಕೆಲವು ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿರುವದು ಬಿಟ್ಟರೆ ಉಳಿದಂತೆ ನಾಪೆÇೀಕ್ಲು ಪಟ್ಟಣದಲ್ಲಿ ವಾಹನ, ಅಂಗಡಿ ಮುಂಗಟ್ಟುಗಳ ವ್ಯಾಪಾರ ಎಂದಿನಂತೆ ಕಂಡು ಬಂತು. ಬಂದ್‍ನ ಪರ ಮತ್ತು ವಿರೋಧ ಹೇಳಿಕೆಗಳು ಎಲ್ಲಿಯೂ ಕಂಡು ಬರಲಿಲ್ಲ.

ಕೆಆರ್ ನಗರ ಪೆÇಲೀಸ್ ವೃತ್ತನಿರೀಕ್ಷಕ ರಘು ನೇತೃತ್ವದಲ್ಲಿ ಸೂಕ್ತ ಪೆÇಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಿದ್ದಾಪುರದಲ್ಲೂ ಬಂದ್‍ಗೆ ಬೆಂಬಲ ವ್ಯಕ್ತವಾಗಲಿಲ್ಲ.

ವೀರಾಜಪೇಟೆಯಲ್ಲಿ ಬಂದ್

ಗೋಣಿಕೊಪ್ಪದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ದಿನಪತ್ರಿಕೆಯ ಅಂಕಣಕಾರ ಸಂತೋಷ್ ತಮ್ಮಯ್ಯ ಅವರನ್ನು ಬಂಧಿಸಿದ ಪ್ರಕರಣವನ್ನು ಖಂಡಿಸಿ ಬಿಜೆಪಿ ಹಾಗೂ ಸಂಘ ಪರಿವಾರ ಗಡಿಯಾರ ಕಂಬದ ಬಳಿ ಇಂದು ಪ್ರತಿಭಟನೆ ನಡೆಸಿತು.

ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಮೇವಡ ಅಯ್ಯಣ್ಣ ಮಾತನಾಡಿ ಇಂದಿನ ಸರ್ಕಾರಗಳು ಜನರ ಮಾತಿನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿವೆÉ. ಮೂಲಭೂತವಾದಿಗಳು, ಕೋಮುವಾದಿಗಳು, ಬುದ್ಧಿಜೀವಿಗಳು, ಅಲ್ಪಸಂಖ್ಯಾತರು ಏನು ಬೇಕಾದರೂ ಮಾತನಾಡಬಹುದು. ಹಿಂದುಗಳು ಆ ರೀತಿ ಮಾತನಾಡಿದರೆ ನಮ್ಮನ್ನು ದಮನ ಮಾಡುತ್ತಿದ್ದಾರೆ. ಹಿಂದೂ ದೇಶದಲ್ಲಿ ಹಿಂದೂಗಳಿಗೊಂದು ಕಾನೂನು ಇತರರಿಗೆ ಒಂದು ಕಾನೂನು ಇದೆ. ರಾತೋರಾತ್ರಿ ಭಯೋತ್ಪಾದಕರನ್ನು ಬಂಧಿಸುವ ರೀತಿಯಲ್ಲಿ ಅಮಾನುಷವಾಗಿ ಸಂತೋಷ್‍ರನ್ನು ಬಂಧಿಸಲಾಗಿದೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಬಿಜೆಪಿ ಮುಖಂಡ ಕುಂಬೇಯಡ ಗಣೇಶ್ ಮಾತನಾಡಿ, ನಾಪೋಕ್ಲುವಿನ ಆಸಿಫ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಧರ್ಮವನ್ನು ನಿಂದಿಸಿರುವ ಬಗ್ಗೆ ದೂರು ದಾಖಲಾಗಿದೆ ಅವರನ್ನು ಕೂಡಲೇ ಬಂಧಿಸಬೇಕು. ಸಂತೋಷ್ ತಮ್ಮಯ್ಯ ಅವರನ್ನು ರಾತೋರಾತ್ರಿ ಬಂಧಿಸಿದ ಪೊಲೀಸರು ಅವರನ್ನು ಏಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಚ್ಚಪಂಡ ಮಹೇಶ್, ಮೂಕೊಂಡ ಶಶಿ ಸುಬ್ರಮಣಿ, ಭವ್ಯ ಚಿಟ್ಟಿಯಣ್ಣ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಬಿಜೆಪಿ ನಗರ ಅಧ್ಯಕ್ಷ ಅನಿಲ್ ಮಂದಣ್ಣ, ವಿಶ್ವ ಹಿಂದೂ ಪರಿಷತ್‍ನ ಕಾರ್ಯದರ್ಶಿ ಟಾಟ ಬೋಪಯ್ಯ, ಹಿಂದೂ ಜಾಗರಣ ವೇದಿಕೆಯ ಚಂದ್ರನ್ ಸೇರಿದಂತೆ ಮುನ್ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಹಿಂದೂ ಸುರಕ್ಷಾ ವೇದಿಕೆ ನೀಡಿದ ಕರೆಯ ಮೇರೆಗೆ ವೀರಾಜಪೇಟೆ ಪಟ್ಟಣದಲ್ಲಿ ಅಪರಾಹ್ನ 12 ರಿಂದ 1 ಗಂಟೆಯವರೆಗೆ ಪಟ್ಟಣದಲ್ಲಿ ಅಂಗಡಿ ಮುಂಗಟ್ಟು, ಹೊಟೇಲ್‍ಗಳನ್ನು ಮುಚ್ಚಲಾಗಿತ್ತು. ಡಿವೈಎಸ್‍ಪಿ ನಾಗಪ್ಪ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ನಿರೀಕ್ಷಕ ಸಂತೋಷ್ ಕಶ್ಯಪ್ ಬಂದೋಬಸ್ತ್‍ನಲ್ಲಿ ಭಾಗವಹಿಸಿದ್ದರು.

ಶ್ರೀಮಂಗಲ : ಶ್ರೀಮಂಗಲದಲ್ಲಿ ಅರ್ಧ ಗಂಟೆ ಬಂದ್ ಆಚರಿಸಲಾಯಿತು. ಬಿ.ಜೆ.ಪಿ. ಸ್ಥಾನೀಯ ಸಮಿತಿ ಮತ್ತು ಚೇಂಬರ್ ಆಫ್ ಕಾಮರ್ಸ್‍ನಿಂದ ಬಂದ್ ಆಚರಿಸಲಾಯಿತು.

ಗೋಣಿಕೊಪ್ಪ ವರದಿ : ಆಕ್ಷೇಪಾರ್ಹ ಭಾಷಣ ಮಾಡಿದ ಆರೋಪದಿಂದ ಬಂಧನವಾಗಿದ್ದ ಪತ್ರಕರ್ತ ಮಾಣಿಪಂಡ ಸಂತೋಷ್ ತಮ್ಮಯ್ಯ ಘಟನೆ ಖಂಡಿಸಿ ಹಾಗೂ ಕೊಡವರ ಜನಾಂಗೀಯ ನಿಂದನೆ ಮಾಡಿರುವ ಆಸೀಫ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕರೆಕೊಟ್ಟಿದ್ದ ಸ್ವಯಂಘೋಷಿತ ಬಂದ್ ಕರೆಗೆ ದಕ್ಷಿಣ ಕೊಡಗಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಗೋಣಿಕೊಪ್ಪ, ಪೊನ್ನಂಪೇಟೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ಬೆರಳೆಣಿಕೆ ಅಂಗಡಿಗಳಷ್ಟು ಮುಚ್ಚಲಾಗಿತ್ತು. ವರ್ತಕರು ಬಂದ್ ಮಾಡಬೇಕೇ ಬೇಡವೇ ಎಂಬ ಗೊಂದಲದಿಂದ ನಿರ್ಧಾರ ತೆಗೆದುಕೊಳ್ಳಲು ಆಗಲಿಲ್ಲ. ಅಷ್ಟರೊಳಗೆ ಕರೆಯಲಾಗಿದ್ದ 1 ಗಂಟೆಯ ಅವಧಿ ಮುಗಿದು ನೀರಸವಾಯಿತು. ಪೊನ್ನಂಪೇಟೆಯಲ್ಲಿ ಕೂಡ ವರ್ತಕರು ಸ್ಪಂದನ ನೀಡಲಿಲ್ಲ. ಬಂದ್ ಬಗ್ಗೆ ಮಾಹಿತಿ ಕೊರತೆ ಕೂಡ ಹಿನ್ನಡೆಯಾಯಿತು.

ಬಾಳೆಲೆ, ಮಾಯಮುಡಿ, ಕೋಣನಕಟ್ಟೆ ಹಾಗೂ ಕಾನೂರು ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕುಟ್ಟದಲ್ಲಿ ಬಿಜೆಪಿ ವತಿಯಿಂದ ಮಾನವ ಸರಪಳಿ ರಚಿಸಿ ಬೆಂಬಲ ಸೂಚಿಸಿತು. ಬಿರುನಾಣಿಯಲ್ಲಿ ಕೂಡ ಬಂದ್ ಯಶಸ್ವಿಯಾಯಿತು. ಟಿ. ಶೆಟ್ಟಿಗೇರಿಯಲ್ಲಿ ಪ್ರತಿಭಟಿಸಿ ಕ್ರಮಕ್ಕೆ ಆಗ್ರಹಿಸಿದರು. ಪಾಲಿಬೆಟ್ಟ, ಅಮ್ಮತ್ತಿ, ತಿತಿಮತಿ ವ್ಯಾಪ್ತಿಯಲ್ಲಿ ನೀರಸ ಉಂಟಾಯಿತು.

ಹೆಚ್ಚಿನ ಪೊಲೀಸರನ್ನು ನಿಯೋಜನೆಗೊಳಿಸಿದ್ದರಿಂದ ಪಟ್ಟಣದಲ್ಲಿ ಸಾರ್ವಜನಿಕರು ಗೊಂದಲಕ್ಕೀಡಾದರು. ಸಾಕಷ್ಟು ಜನರಿಗೆ ಬಂದ್ ಮಾಹಿತಿ ಇರಲಿಲ್ಲ. ಬಂದ್‍ಗೆ ಕರೆ ನೀಡಿದ್ದರೂ ಸ್ಥಳೀಯ ಮುಖಂಡರುಗಳು ಮಾಹಿತಿ ನೀಡದೆ ಗೊಂದಲಕ್ಕೆ ಕಾರಣವಾಯಿತು.

ಕುಟ್ಟ - ಟಿ. ಶೆಟ್ಟಿಗೇರಿಯಲ್ಲಿ...

ಬಂದ್ ಕರೆಗೆ ಕುಟ್ಟ ಹಾಗೂ ಟಿ.ಶೆಟ್ಟಿಗೇರಿಯಲ್ಲಿ ಪೂರ್ಣ ಬೆಂಬಲ ವ್ಯಕ್ತಗೊಂಡಿತು. ಕುಟ್ಟದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮಾನವ ಸರಪಳಿಯೊಂದಿಗೆ ಪ್ರಕರಣವನ್ನು ಖಂಡಿಸಲಾಯಿತು. ಟಿ.ಶೆಟ್ಟಿಗೇರಿಯಲ್ಲಿಯೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಲಾಯಿತು.

ಕುಶಾಲನಗರ: ಸಂತೋಷ್ ತಮ್ಮಯ್ಯ ಅವರ ಬಂಧನ ಖಂಡಿಸಿ ಕುಶಾಲನಗರದಲ್ಲಿ ಹಿಂದೂ ಸುರಕ್ಷಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.

ಕೊಡಗು ಜಿಲ್ಲಾ ಬಂದ್ ಕರೆ ಹಿನ್ನೆಲೆಯಲ್ಲಿ ಸಂಘ ಪರಿವಾರ ಕಾರ್ಯಕರ್ತರು ಕುಶಾಲನಗರ ಆಂಜನೇಯ ದೇವಾಲಯದಿಂದ ಮೆರವಣಿಗೆ ಹೊರಟು ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಸೇರಿ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್, ಸರಕಾರ ಜನಾಂಗವೊಂದರ ತುಷ್ಟೀಕರಣಕ್ಕೆ ಮುಂದಾಗಿದ್ದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶಗೊಳಿಸಲು ಹೊರಟಿದೆ ಎಂದು ಆರೋಪಿಸಿದರು.

ಮತ ಬ್ಯಾಂಕ್ ಗುರಿಯಿಟ್ಟುಕೊಂಡು ಜಾತಿ ಕಲಹಗಳನ್ನು ಹುಟ್ಟುಹಾಕಲು ಪ್ರೇರಣೆ ನೀಡುತ್ತಿದೆ ಎಂದರು.

ಈ ಸಂದರ್ಭ ಹಿಂದೂ ಸುರಕ್ಷಾ ವೇದಿಕೆಯ ತೆಕ್ಕಟ್ಟೆ ವಿಜಯಕುಮಾರ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಹಿಂದೂ ಸುರಕ್ಷಾ ವೇದಿಕೆಯ ಪ್ರಮುಖರಾದ ಅಮೃತ್‍ರಾಜ್, ನವನೀತ್, ನಾಣಿ, ಚಂದ್ರಶೇಖರ್, ಎಂ.ವಿ.ನಾರಾಯಣ್ ಹಿಂದೂ ಸುರಕ್ಷಾ ವೇದಿಕೆಯ ಪದಾಧಿಕಾರಿಗಳು ಮತ್ತಿತರರು ಇದ್ದರು.

ಸೋಮವಾರಪೇಟೆ ಯಥಾಸ್ಥಿತಿ

ಸೋಮವಾರಪೇಟೆ : ಧರ್ಮ ನಿಂದನೆ ಆರೋಪದಡಿ, ಅಂಕಣಕಾರ ಸಂತೋಷ್ ತಮ್ಮಯ್ಯ ಬಂಧನ ವಿರೋಧಿಸಿ ಹಾಗೂ ಜನಾಂಗ ನಿಂದನೆಯ ಆರೋಪದಡಿ ಆಸೀಫ್ ಬಂಧನಕ್ಕೆ ಆಗ್ರಹಿಸಿ ಹಿಂದೂ ಸುರಕ್ಷಾ ವೇದಿಕೆ ಕರೆ ನೀಡಿದ್ದ ಒಂದು ಗಂಟೆ ಕೊಡಗು ಬಂದ್‍ಗೆ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬುಧವಾರ 12 ಗಂಟೆಯಿಂದ 1ರ ತನಕ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿರಲಿಲ್ಲ. ಎಂದಿನಂತೆ ವರ್ತಕರು ವ್ಯಾಪಾರ ವಹಿವಾಟು ನಡೆಸಿದರು. ಜನಜೀವನ ಎಂದಿನಂತಿತ್ತು. ಖಾಸಗಿ ಬಸ್ ನಿಲ್ದಾಣದಲ್ಲಿ ಡಿಎಆರ್ ತುಕಡಿಯ ವಾಹನವನ್ನು ನಿಲ್ಲಿಸಲಾಗಿತ್ತು. ಪಟ್ಟಣದ ಪೊಲೀಸರು ಕರ್ತವ್ಯದಲ್ಲಿದ್ದರು. ಸೋಮವಾರಪೇಟೆ ಪಟ್ಟಣ ಯಥಾಸ್ಥಿತಿಯಲ್ಲಿತ್ತು.

ಬಂಧನಕ್ಕೆ ಖಂಡನೆ

ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷದ್, ಬಜರಂಗದಳದಿಂದ ನಿನ್ನೆ ದಿನ ತುರ್ತು ಸಭೆ ಸೇರಿ ಅಸೀಮ ಮಾಸಿಕ ಸಂಪಾದಕ ಹಾಗೂ ಅಂಕಣಕಾರ ಸಂತೋಷ್ ತಮ್ಮಯ್ಯ ಅವರನ್ನು ಪೊಲೀಸರು ರಾತ್ರೋರಾತ್ರಿ ಬಂಧಿಸಿದ ಕ್ರಮವನ್ನು ತೀವ್ರವಾಗಿ ಖಂಡಿಸಲಾಯಿತು. ಈಚೆಗೆ ಗೋಣಿಕೊಪ್ಪಲುವಿನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಂತೋಷ್ ತಮ್ಮಯ್ಯ ಟಿಪ್ಪುವಿನ ವಿರುದ್ಧ ಮಾತನಾಡಿದ್ದು, ಮಾಧ್ಯಮ ಒಂದರ ವರದಿ ಆಧರಿಸಿ ಅನ್ಯ ಕೋಮಿನ ವ್ಯಕ್ತಿ ದುರುದ್ದೇಶದಿಂದ ನೀಡಿರುವ ಪುಕಾರು ಆಧರಿಸಿ ಪೊಲೀಸರು ಬಂಧಿಸಿದ್ದು ದುರದೃಷ್ಟಕರ ಎಂದು ಸಂಘಟನೆ ಹೇಳಿದೆ.

ಬಿಜೆಪಿ ಖಂಡನೆ

ಸಂತೋಷ್ ತಮ್ಮಯ್ಯ ಅವರನ್ನು ಬಂಧಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ರಾಜ್ಯ ಕಾಂಗ್ರೆಸ್ - ಜೆಡಿಎಸ್ ಸರ್ಕಾರದ ಗಧಾ ಪ್ರಹಾರ ನಡೆದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಅರವಿಂದ ಲಿಂಬಾವಳಿ ಟೀಕಿಸಿದ್ದಾರೆ. ಪ್ರಚೋದನಾಕಾರಿ ಭಾಷಣ ಮಾಡಿರುವ ಬಗ್ಗೆ ಯಾವದೇ ಪುರಾವೆ ಇಲ್ಲದಿದ್ದರೂ, ಕೇವಲ ರಾಜಕೀಯ ಕಾರಣಕ್ಕೆ ಸಂತೋಷ್ ತಮ್ಮಯ್ಯ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿರುವ ಅವರು ಈ ರೀತಿಯ ದಮನಕಾರಿ ನೀತಿ ಮುಂದುವರೆದರೆ, ರಾಜ್ಯಾದ್ಯಂತ ಸರ್ಕಾರದ ಧೋರಣೆ ವಿರುದ್ಧ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆಯಿತ್ತಿದ್ದಾರೆ.