ಶನಿವಾರಸಂತೆ, ನ. 11: ಶನಿವಾರಸಂತೆ ಸಮೀಪದ ಹಂಡ್ಲಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕೆ. ವಿಕ್ರಾಂತ್ 2017ನೇ ಸಾಲಿನ ರಾಷ್ಟ್ರೀಯ ಐ.ಸಿ.ಟಿ. ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಭಾವಶಾಲಿಯಾಗಿ ಬೋಧನೆ ಮಾಡುವ ಅತ್ಯುತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಅಂತಹ ಶಿಕ್ಷಕರಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಎನ್.ಸಿ.ಇ.ಆರ್.ಟಿ. ಹಾಗೂ ಸಿ.ಐ.ಇ.ಟಿ. ಸಹಭಾಗಿತ್ವದಲ್ಲಿ ಐಸಿಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತಿದೆ. ವಿಕ್ರಾಂತ್ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಶಿಕ್ಷಕ.

ಆಂಗ್ಲ ಭಾಷಾ ಶಿಕ್ಷಕರಾಗಿರುವ ವಿಕ್ರಾಂತ್ ಬೋಧನೆಯ ಅನುಕೂಲಕ್ಕೆ ವಿಡಿಯೋಗಳು, ಪ್ರೆಸೆಂಟೇಷನ್, ವರ್ಕ್ ಶೀಟ್, ಇಂಟರ್ ಆ್ಯಕ್ಟೀವ್ ಟೂಲ್‍ಗಳು, ರಸಪ್ರಶ್ನೆಗಳು, ಚಟುವಟಿಕೆ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿಕೊಂಡು ಈ ಎಲ್ಲಾ ಸಂಪನ್ಮೂಲಗಳನ್ನು ಯೂಟೂಬ್ ಚಾನೆಲ್ ಬ್ಲಾಗ್‍ನಲ್ಲಿ ಹಂಚಿಕೊಂಡಿದ್ದಾರೆ. ಶಿಕ್ಷಕರಿಗೆ ನೀಡುವ ಐ.ಸಿ.ಟಿ. ಆಧಾರಿತ ತರಬೇತಿಗಳಲ್ಲಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಾರೆ. ಡಯಟ್‍ನಲ್ಲೂ ಸಂಪನ್ಮೂಲ ವ್ಯಕ್ತಿಯಾಗಿ ವಿಜ್ಞಾನ, ಸಮಾಜ, ಗಣಿತ ಹಾಗೂ ಆಂಗ್ಲ ಭಾಷೆಯ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ಈ ಎಲ್ಲಾ ಸಾಧನೆಯನ್ನು ಗುರುತಿಸಿ ಕೇಂದ್ರ ಸರಕಾರ ವಿಕ್ರಾಂತ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.