ಶ್ರೀಮಂಗಲ, ನ. 11: ಕೊಡಗಿನ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶದ ಸಂತ್ರಸ್ತ ಕುಟುಂಬದ 130 ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣ ನೀಡುತ್ತಿರುವ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಗೆ ಯುಕೊ ಸಂಘಟನೆಯ ಮನವಿ ಮೇರೆಗೆ ಹುಬ್ಬಳ್ಳಿ ಕೊಡವ ಸಂಘದಿಂದ ಸಂಗ್ರಹಿಸಿದ ರೂ. 1 ಲಕ್ಷ ಚೆಕ್ ಮತ್ತು ಮಿನಿ ಟ್ರಕ್‍ನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ದಿನನಿತ್ಯ ಬಳಕೆಯ ಸಾಮಗ್ರಿಗಳನ್ನು ವಿತರಿಸಲಾಯಿತು.

ಹುಬ್ಬಳ್ಳಿ ಕೊಡವ ಸಂಘದ ಕೊಂಗಾಂಡ ಸುಬಾಷ್‍ರವರ ಮುತುವರ್ಜಿಯಲ್ಲಿ, ಹುಬ್ಬಳ್ಳಿಯ ಮೋಹನ್‍ರವರ ಸಹಕಾರದಲ್ಲಿ ಹಣ ಹಾಗೂ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಕಳುಹಿಸಲಾಗಿತ್ತು. ಅಗತ್ಯ ವಸ್ತುಗಳಲ್ಲಿ ಯು.ಕೆ.ಜಿ.ಯಿಂದ ಪದವಿ ತರಗತಿವರಗೆ ವಿದ್ಯಾಶ್ರಯ ಪಡೆದಿರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಉಡುಪು, ಬೆಡ್‍ಶೀಟ್, ಕಂಬಳಿ, ಟವಲ್ ಸೇರಿದಂತೆ ಇತ್ಯಾದಿ ವಸ್ತುಗಳನ್ನು ನೀಡಲಾಯಿತು.

ಹುಬ್ಬಳ್ಳಿಯ ಮುತ್ತು ಎಂಬವರು ತಮ್ಮ ಮಿನಿ ಟ್ರಕ್‍ನಲ್ಲಿ ತಾವೇ ಖುದ್ದು ಆಗಮಿಸಿ ವಿದ್ಯಾಸಂಸ್ಥೆಯ ಅಧ್ಯಕ್ಷ ಝರು ಗಣಪತಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಯುಕೊ ಸಂಘಟನೆಯ ಚೆಪ್ಪುಡಿರ ಸುಜು ಕರುಂಬಯ್ಯ, ಪ್ರತಿಮ ಕರುಂಬಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಸುಜೋತಿ ಸುಬ್ಬಯ್ಯ ಹಾಜರಿದ್ದರು.