ಸೋಮವಾರಪೇಟೆ, ನ. 11: 94ಸಿ ಅಡಿಯಲ್ಲಿ 2012ಕ್ಕಿಂತಲೂ ಹಿಂದೆ ಮನೆ ನಿರ್ಮಿಸಿಕೊಂಡ ಗ್ರಾಮೀಣ ಜನರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಸುವರ್ಣ ಕನ್ನಡನಾಡು ವೇದಿಕೆ ಪದಾಧಿಕಾರಿಗಳು ಶಾಸಕ ಅಪ್ಪಚ್ಚು ರಂಜನ್ ಮತ್ತು ತಾಲೂಕು ತಹಶೀಲ್ದಾರ್‍ರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿ 6150 ಏಕರೆ ಸಿ ಮತ್ತು ಡಿ ಭೂಮಿಯನ್ನು ಸರ್ಕಾರ ರದ್ದುಪಡಿಸಿ ಆದೇಶ ಹೊರಡಿಸಿದೆ. ಆದರೆ, ಸರ್ಕಾರಿ ಜಾಗದಲ್ಲಿ 2012ಕ್ಕೂ ಹಿಂದೆ ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರಗಳನ್ನು ನೀಡಿಲ್ಲ. ಹಿಂದಿನ ಸರ್ಕಾರ ಇಂತಹ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡುವದಾಗಿ ಹೇಳಿತ್ತು. ಕೂಡಲೇ ಇಂತಹವರಿಗೆ ಹಕ್ಕುಪತ್ರ ನೀಡಬೇಕೆಂದು ಸಮಿತಿ ರಾಜ್ಯಾಧ್ಯಕ್ಷ ಅಜಿತ್ ಕೊತ್ನಳ್ಳಿ ಆಗ್ರಹಿಸಿದರು.

ಈ ಸಂದರ್ಭ ಸಮಿತಿಯ ಗುಡ್ಡಳ್ಳಿ ಸಜನ್ ಮಂದಣ್ಣ, ಕೊತ್ತನಳ್ಳಿ ಸುರೇಶ್, ಆದರ್ಶ್ ತಮ್ಮಯ್ಯ, ಚೆನ್ನಕೇಶವ, ವಿನಯ್ ಕುಶಾಲಪ್ಪ, ಮತ್ತಿತರರು ಉಪಸ್ಥಿತರಿದ್ದರು.