ಗೋಣಿಕೊಪ್ಪಲು, ನ. 11: ವೀರಾಜಪೇಟೆ ತಾಲೂಕಿನ ಕಾಕೋಟುಪರಂಬುವಿನಲ್ಲಿರುವ ಬಾಲಕರ ವಸತಿ ನಿಲಯಕ್ಕೆ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ದಿಢೀರ್ ಭೇಟಿ ನೀಡಿ ವಸತಿ ನಿಲಯದ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು. ವಸತಿ ನಿಲಯದ ಮೇಲ್ವಿಚಾರಕ ರೇಣುಕುಮಾರ್ ಸ್ಥಳದಲ್ಲಿ ಇಲ್ಲದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು. ಹಲವಾರು ಸಮಯದಿಂದ ನಿಲಯದಲ್ಲಿ ಮೇಲ್ವಿಚಾರಕರು ಲಭ್ಯವಿಲ್ಲದ ಬಗ್ಗೆ ಸಾರ್ವಜನಿಕರು ಅಧ್ಯಕ್ಷರೊಂದಿಗೆ ನೋವನ್ನು ತೋಡಿಕೊಂಡರು.
ಸ್ಥಳಕ್ಕೆ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಪ್ರೀತಿ ಚಿಕ್ಕಮಾದಯ್ಯ ಅವರನ್ನು ಬರಮಾಡಿಕೊಂಡು ನಿಲಯದ ಅವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭ ನಿಲಯ ದಲ್ಲಿರುವ ವಿದ್ಯಾರ್ಥಿಗಳು ಬೀಡಿ-ಸಿಗರೇಟು ಸೇದುವ ಬಗ್ಗೆ ಹಾಗೂ ಸಮೀಪದ ಕೆರೆ, ಹೊಳೆಯಲ್ಲಿ ಮೀನು ಹಿಡಿಯುವ ಬಗ್ಗೆ ಸಾರ್ವಜನಿಕರು ಅಧ್ಯಕ್ಷರಿಗೆ ಮಾಹಿತಿ ಒದಗಿಸಿದರು. ದಿನನಿತ್ಯ ಮೇಲ್ವಿಚಾರಕರು ನಿಲಯಕ್ಕೆ ಭೇಟಿ ನೀಡದೇ ಇರುವದರಿಂದ ಅಡುಗೆ ಯವರು, ಸಹಾಯಕರು ಸರಿಯಾಗಿ ಕೆಲಸ ನಿರ್ವಹಿಸದೆ ಇರುವ ಕಾರಣ ವಿದ್ಯಾರ್ಥಿಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ದೂರಿದರು.
ತಕ್ಷಣದಿಂದ ನಿಲಯದಲ್ಲಿರುವ ಮೇಲ್ವಿಚಾರಕರನ್ನು ಹಾಗೂ ಅಡುಗೆಯವರನ್ನು ಬದಲಾಯಿಸು ವಂತೆ ಅಧ್ಯಕ್ಷ ಸಿ.ಕೆ. ಬೋಪಣ್ಣ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯವರಿಗೆ ದೂರವಾಣಿ ಮೂಲಕ ಮಾತನಾಡಿದರು. ಈ ಬಗ್ಗೆ ಕೂಡಲೇ ಕ್ರಮ ವಹಿಸುವದಾಗಿ ಅಧಿಕಾರಿ ಭರವಸೆ ನೀಡಿದರು. ಭೇಟಿ ಸಂದರ್ಭ ಕಾಕೋಟುಪರಂಬು ಕ್ಷೇತ್ರದ ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್, ಅಧ್ಯಕ್ಷರ ಆಪ್ತ ಸಹಾಯಕ ಜಪ್ಪು ಸುಬ್ಬಯ್ಯ ಹಾಜರಿದ್ದರು.
- ಹೆಚ್.ಕೆ. ಜಗದೀಶ್