ಸೋಮವಾರಪೇಟೆ, ನ. 11: ಕಳೆದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಭೂ ಕುಸಿತದಿಂದ ಸೋಮವಾರಪೇಟೆ, ಮಲ್ಲಳ್ಳಿ ಮಾರ್ಗದ ಮುಖ್ಯ ರಸ್ತೆಯ ಕುಮಾರಳ್ಳಿ-ಬಾಚಳ್ಳಿ ಗ್ರಾಮದ ಸಮೀಪ ಕುಸಿದ ರಸ್ತೆಯ ದುರಸ್ತಿ ಕಾಮಗಾರಿ ಬರದಿಂದ ಸಾಗುತ್ತಿದೆ. ಕಳೆದ ಎರಡೂವರೆ ತಿಂಗಳಿನಿಂದ ಕಿರಿದಾದ ರಸ್ತೆಯಲ್ಲೆÀ ವಾಹನಗಳು ಸಂಚರಿಸುತ್ತಿದ್ದವು. ಮಳೆ ಸುರಿಯುತ್ತಿರುವ ಸಂದರ್ಭ ಪೂರ್ಣ ರಸ್ತೆ ಕುಸಿಯುವ ಆತಂಕದಲ್ಲಿ ಗ್ರಾಮಸ್ಥರಿದ್ದರು. ಈಗ ಮಲ್ಲಳ್ಳಿ ಜಲಪಾತವನ್ನು ವೀಕ್ಷಿಸಲು ದಿನಂಪ್ರತಿ ಪ್ರವಾಸಿಗರ ನೂರಾರು ವಾಹನಗಳು ಈ ರಸ್ತೆಯಲ್ಲೇ ಸಂಚರಿಸುತ್ತಿವೆ. ಪ್ರವಾಸಿಗರನ್ನು ತುಂಬಿಸಿಕೊಂಡು ತೆರಳುವ ಬಸ್‍ಗಳು ಸೇರಿದಂತೆ ಇತರ ವಾಹನಗಳು ಆತಂಕದಲ್ಲೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿಗೆ ಮುಂದಾಗಿದೆ. ಕಳೆದ 15 ದಿನಗಳಿಂದ 50 ಕಾರ್ಮಿಕರು ಎಂ. ಸ್ಯಾಂಡ್ ಚೀಲಗಳನ್ನು ಉಪಯೋಗಿಸಿ ತಡೆಗೋಡೆ ನಿರ್ಮಿಸುವ ಮೂಲಕ ರಸ್ತೆ ದುರಸ್ತಿಯಲ್ಲಿ ತೊಡಗಿದ್ದಾರೆ.