ಮಡಿಕೇರಿ, ನ. 10: ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ‘ಜನಪರ ರಾಜಕೀಯದ ಭಾಗವಾಗಿ ಎಸ್‍ಡಿಪಿಐಯೊಂದಿಗೆ ಮುಂದೆ ಸಾಗಿ’ ಎಂಬ ಘೋಷಣೆಯೊಂದಿಗೆ ನವೆಂಬರ್ ತಿಂಗಳಾದ್ಯಂತ ರಾಷ್ಟ್ರಾದ್ಯಂತ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಟಿ.ಹೆಚ್. ಅಬೂಬಕರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮೂರು ಮಂದಿಗೆ ಸಾಂಕೇತಿಕವಾಗಿ ಸದಸ್ಯತ್ವ ನೀಡಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಈ ಒಂದು ತಿಂಗಳಿನಲ್ಲಿ ಮೂರು ಸಾವಿರ ಮಂದಿಯನ್ನು ಸದಸ್ಯರನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಒಂದು ವಾರ್ಡ್‍ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಬೆಂಬಲ ನೀಡಿದ್ದರಿಂದ ತಮ್ಮ ಪಕ್ಷದ ಅಭ್ಯರ್ಥಿ ಎರಡನೇ ಸ್ಥಾನ ಪಡೆಯುವಂತಾಯಿತು ಎಂದು ವಿಶ್ಲೇಷಿಸಿದ ಅವರು, ಪಕ್ಷ ಉತ್ತಮ ಸಾಧನೆ ಮಾಡಿದೆ ಎಂದು ಟಿ.ಹೆಚ್. ಅಬೂಬಕರ್ ಹೇಳಿಕೊಂಡರು. ಈ ಸಂದರ್ಭ ಎಸ್‍ಡಿಪಿಐ ಪ್ರಮುಖರು ಅಭಿಯಾನದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿದರು.