(ಹೆಚ್.ಕೆ.ಜಗದೀಶ್)
ಗೋಣಿಕೊಪ್ಪ ನ. 7 : ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಅತೀ ಹೆಚ್ಚು ಆದಾಯ ಹೊಂದಿರುವ ಗ್ರಾಮ ಪಂಚಾಯ್ತಿಯಲ್ಲಿ ದಿನನಿತ್ಯ ನಗರದ ಶುಚಿತ್ವ ಕಾರ್ಯ ನಡೆಸುವ ಪೌರ ಕಾರ್ಮಿಕರ ಸಮಸ್ಯೆಗಳನ್ನು ಆಲಿಸುವವರೇ ಇಲ್ಲದಂತಾಗಿದೆ. ದಶಕಗಳಿಂದ ಜೋಪಡಿಗಳಲ್ಲಿ ವಾಸ ಮಾಡುತ್ತಿರುವ ಇವರ ಬದುಕು ಹಸನಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಹೆಚ್ಚಿನ ವರಮಾನ ಪಂಚಾಯ್ತಿಗೆ ಇದ್ದರೂ ಇವರ ಬದುಕಿಗೆ ಕನಿಷ್ಟ ಕನಿಕರ ತೋರುವಲ್ಲಿ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಸಂಪೂರ್ಣ ವಿಫಲರಾಗಿದ್ದಾರೆ. ಶೇ.25ರ ಪರಿಶಿಷ್ಟರ ಅನುದಾನದಲ್ಲಿ ಇವರ ಬದುಕನ್ನು ಹಸನು ಮಾಡುವ ಅವಕಾಶವಿದ್ದರೂ ಈ ಬಗ್ಗೆ ಯಾರಿಗೂ ಅರಿವು ಇಲ್ಲದಂತೆ ಸಮಯ ಕಳೆಯುತ್ತಿದ್ದಾರೆ. ಪ್ರತಿವರ್ಷ ಕೇವಲ ಚರಂಡಿ, ರಸ್ತೆ ಮೋರಿಗಳನ್ನೇ ನಿರ್ಮಾಣ ಮಾಡಿಕೊಂಡು ಇವರಿಗೆ ಮೀಸಲಿಟ್ಟ ಅನುದಾನವನ್ನು ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದಾರೆ.
ಬೆಳ್ಳÀಂಬೆಳಗ್ಗೆ ಎದ್ದು ಊರನ್ನೆಲ್ಲ ಸ್ವಚ್ಛಗೊಳಿಸೋ ಮಂದಿ, ನಗರದ ಕಸ, ಕಡ್ಡಿ, ತ್ಯಾಜ್ಯಗಳನ್ನು ಹೊತ್ತೊಯ್ದು ಕ್ಲೀನ್ ಸಿಟಿ ಮಾಡುವ ಅವರ ಬದುಕು ಮಾತ್ರ ಇನ್ನೂ ಹಸನಾಗಿಲ್ಲ. ಅದೇ ಕತ್ತಲ ಬದುಕು, ಗೋಳಿನ ಕಥೆ, ಮುಗಿಯದ ಸಮಸ್ಯೆ ನಡುವೆ ಜೀವನ ಸಾಗಿಸುತ್ತಿದ್ದಾರೆ.
ಸೂರ್ಯ ಹುಟ್ಟುವ ಮೊದಲು ದಿನನಿತ್ಯದ ಕೆಲಸಕ್ಕೆ ಹಾಜರಾಗುವ ಪೌರ ಕಾರ್ಮಿಕರು ನಗರದ ಬೀದಿ,ಬೀದಿ ಗುಡಿಸಿ ನಗರದ ಅಂದ ಹೆಚ್ಚಿಸುತ್ತಾರೆ. ಮನೆಮನೆಗೆ ತೆರಳಿ ಕಸವನ್ನು ಸಂಗ್ರಹಿಸುತ್ತಾರೆ.ಚರಂಡಿ ಇರಲಿ, ಶೌಚ ಗುಂಡಿ ಇರಲಿ ಶುಚಿಗೊಳಿಸುವ ಮೂಲಕ ದುರ್ನಾತ ಇಲ್ಲದಂತೆ ಮಾಡುತ್ತಾರೆ. ಕೆಲಸ ಮುಗಿಸಿ ವಿಶ್ರಾಂತಿ ಪಡೆಯಲು ಇವರ ಮನೆಗೆ ತೆರಳಿದರೆ ಅಲ್ಲಿ ನೆಮ್ಮದಿ ಇಲ್ಲದ ಬದುಕು ಸವೆಸುತ್ತ ಅನೇಕ ವರ್ಷಗಳನ್ನು ಇರುವ ಜೋಪಡಿಗಳಲ್ಲೇ ಕಳೆಯುತ್ತಾರೆ. ಇತ್ತ ಪಂಚಾಯ್ತಿ ಅಧ್ಯಕ್ಷರು ದಲಿತ ಸಮುದಾಯದಿಂದ ಆರಿಸಿ ಬಂದರೂ ಇವರ ಕಷ್ಟ, ಸುಖಗಳನ್ನು ವಿಚಾರಿಸದೆ ವರ್ಷಗಳೇ ಉರುಳಿವೆ. ಇವರು ವಾಸ ಮಾಡುವ ಮನೆಯತ್ತ ಸುಳಿವಂತೂ ಇಲ್ಲವೇ ಇಲ್ಲ. ಪಂಚಾಯ್ತಿ ಕುರ್ಚಿಯಲ್ಲಿ ಕುಳಿತುಕೊಂಡು ಅಧಿಕಾರದ ನಡೆಸುವ ಇವರು ಪೌರ ಕಾರ್ಮಿಕರ ಕಷ್ಟ ಕಾರ್ಪಣ್ಯಗಳಿಗೆ ಕಿಂಚಿತ್ತು ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಧ್ಯಕ್ಷಗಾದಿಯಲ್ಲಿ ಅನೇಕ ಜನಪರ ಕೆಲಸ ಮಾಡುವ ಅವಕಾಶವಿದ್ದರೂ ಇದ್ಯಾವದು ತÀನಗೆ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿರುವದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.
ಸಮಾಜದ ಸ್ವಚ್ಛತೆ ಕಾಪಾಡಲು ಬಹುಮುಖ್ಯ ಪಾತ್ರ ವಹಿಸಿರುವ ಪೌರ ಕಾರ್ಮಿಕರ ಬದುಕು ಮಾತ್ರ ಮೂರಬಟ್ಟೆಯಾಗಿದೆ. ದಿನನಿತ್ಯ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವ ಕಾರ್ಮಿಕರ ಬದುಕು ಸೂತ್ರವಿಲ್ಲದ ಗಾಳಿಪಟದಂತಾಗಿದೆ. ವಾಣಿಜ್ಯ ನಗರಿ ಗೋಣಿಕೊಪ್ಪಲುವಿನಲ್ಲಿ ದಿನನಿತ್ಯ ರಾಶಿಗಟ್ಟಲೆ ಕಸವನ್ನು ಶುಚಿಗೊಳಿಸುವ ಪೌರಕಾರ್ಮಿಕರ ಬದುಕಿಗೆ ಬೆಲೆ ಇಲ್ಲದಂತಾಗಿದೆ.
ಇದೇ ವಾರ್ಡ್ನಿಂದ ಮತ ಪಡೆದು ತೆರಳುವ ಈ ಭಾಗದ ಸದಸ್ಯರಿಂದ ಇವರ ಬದುಕಿಗೆ ಆಸರೆಯಂತೂ ಸಿಗುತ್ತಿಲ್ಲ. ಕೇವಲ ನೆಪಗಳನ್ನಷ್ಟೇ ಹೇಳಿಕೊಂಡು ಸಮಯ ಕಳೆಯುವ ಮೂಲಕ ಈಗಾಗಲೇ ಎರಡೂವರೆ ವರ್ಷಗಳನ್ನು ಕಳೆದಿದ್ದಾರೆ. ಜನಪ್ರತಿನಿಧಿಗಳಿಗೆ ಇವರಿಂದ ಸೇವೆ ಬೇಕೇ ವಿನಃ ಇವರ ಬದುಕು ಹಸನಾಗುವ ನಿಟ್ಟಿನಲ್ಲಿ ಇಚ್ಛಾ ಶಕ್ತಿ ತೋರಿಸುತ್ತಿಲ್ಲ. ಲಕ್ಷ-ಲಕ್ಷ ಹಣವಿದ್ದರೂ ಇವರ ಕಷ್ಟಗಳಿಗೆ ಅನುದಾನ ಸಿಗುತ್ತಿಲ್ಲ. ಇಂದಿಗೂ ಸಾಂಕ್ರಾಮಿಕರೋಗ ಹರಡುವ ಕೂಪದಲ್ಲಿ ಬದುಕು ಸಾಗಿಸುತ್ತಿರುವ ಇವರ ಜೀವಕ್ಕೆ ಕಿಂಚಿತ್ತು ಬೆಲೆ ಇಲ್ಲದಂತಾಗಿದೆ.
ಸುಮಾರು 20 ಕುಟುಂಬಗಳು ಇಲ್ಲಿ ಜೀವನ ಸಾಗಿಸುತ್ತಿದ್ದು. ಇವರ ಮನೆಗಳ ಗೋಡೆಗಳು ಬಿರುಕು ಬಿದ್ದು ಅಪಾಯದ ಮನ್ಸೂಚನೆ ತೋರುತ್ತಿದೆ. ದಿನನಿತ್ಯ ಸಾವಿನ ಮಡಿಲಿನಲ್ಲಿ ಮಲಗುವ ಪೌರಕಾರ್ಮಿಕರ ಗೋಳು ಸರ್ಕಾರಿ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳ ಕಿವಿಗೆ ಬಿದ್ದಂತಿಲ್ಲ. ಸ್ಥಳೀಯ ಗ್ರಾಮ ಪಂಚಾಯ್ತಿಯಂತೂ ಇವರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ.
ಕಾರ್ಮಿಕರ ಮನೆಯ ಗೋಡೆಗಳು ಕುಸಿಯುವ ಹಂತ ತಲುಪಿದೆ. ವೃದ್ಧರು, ಮಕ್ಕಳು, ಮಹಿಳೆಯರು ಮನೆಯಲ್ಲಿರಲು ಹೆದರುತ್ತಾರೆ. ಇನ್ನೂ ಮನೆಯ ಪಕ್ಕದಲ್ಲಿ ಶೌಚಗುಂಡಿ ಇರುವದರಿಂದ ಗೋಡೆಗಳು ತೇವಾಗೊಳ್ಳುತ್ತಿದೆ. ದುರ್ನಾತÀದಿಂದ ವಾಸಿಸಲಾಗದÀ ಪರಿಸ್ಥಿತಿ ಜೊತೆಗೆ ಶೀಟ್ಗಳು ಕೂಡ ಬೀಳುವ ಹಂತ ತಲುಪಿದೆ ಎಂದು ಕಾರ್ಮಿಕರು ಅಳಲು ತೊಡಿಕೊಳ್ಳುತ್ತಿದ್ದಾರೆ.
ಪೌರಕಾರ್ಮಿಕರ ಮನೆಗಳ ಸುತ್ತ ಮುತ್ತ ಅಶುಚಿತ್ವದಿಂದ ಕೂಡಿದ್ದು. ಅಲ್ಲೇ ಪಕ್ಕದಲ್ಲಿ ಮಾಂಸ, ಮೀನು ಮಾರುಕಟ್ಟೆ ಇರುವದರಿಂದ ಅಲ್ಲಿನ ತ್ಯಾಜ್ಯಗಳಿಂದ ಪೌರಕಾರ್ಮಿಕರ ಮಕ್ಕಳು ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗಿದ್ದಾರೆ. ಆಡುವ ಮಕ್ಕಳು ಕ್ಯಾನ್ಸರ್, ಟಿಬಿ, ಅಸ್ತಮಾ, ಅಲರ್ಜಿ ಅಂತಹ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ವರ್ಷದಲ್ಲಿ ಮೂರರಿಂದ ನಾಲ್ವರು ರೋಗ ರುಜಿನಗಳಿಂದಲೇ ಸಾವನ್ನಪ್ಪುತ್ತಿರುವದು ವಿಪರ್ಯಾಸ.
ಇತ್ತೀಚಿನ ವರ್ಷದಲ್ಲಿ 3 ವರ್ಷದ ಹಸುಗೂಸು ಕ್ಯಾನ್ಸರ್ನಿಂದ ಬಳಲಿ ಮರಣ ಹೊಂದಿದ ನಿದರ್ಶನ ಕೂಡ ಇದೆ.ಮತ್ತೊಬ್ಬ 10 ವರ್ಷದ ಬಾಲಕ ಟಿಬಿಯಿಂದ ಬಳಲುತ್ತಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇನ್ನೂ ಅದೆಷ್ಟೋ ಮಕ್ಕಳು ಸೊಳ್ಳೆ ಕಡಿತದಿಂದ ನೋವನ್ನು ಅನುಭವಿಸುತ್ತಿದ್ದಾರೆ. ಹಾಲು ಕುಡಿಯುವ ಮಕ್ಕಳ ಬಾಯಲ್ಲಿ ಹುಣ್ಣುಗಳು ಬರಲಾರಂಭಿಸಿದ್ದು ಮಕ್ಕಳ ತಾಯಿಯಂದಿರು ಈ ರೀತಿ ಇನ್ನೂ ಎಷ್ಟು ಮಕ್ಕಳು ಸಾಯಬೇಕು; ನಮ್ಮ ಮಕ್ಕಳೇನು ಮನುಷ್ಯರಲ್ಲವೇ ಎಂದು ಕಣ್ಣೀರಿಡುತ್ತಾ ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ.
ಇಲ್ಲಿರುವ 20 ಮನೆಗಳಿಗೆ ಕೇವಲ 2 ಶೌಚಾಲಯವಿದೆ; ಇಲ್ಲಿರುವ ನೀರಿನ ಟ್ಯಾಂಕ್ ಶುಚಿಗೊಳಿಸದೆ ವರ್ಷ ಕಳೆದಿದೆ. ಇದ್ದ ಒಂದು ನೀರಿನ ಟ್ಯಾಂಕ್ ಕೂಡ ಈಗ ಕಾರ್ಯ ನಿರ್ವಹಿಸುತ್ತಿಲ್ಲ. ಕುಟುಂಬಗಳು ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಉಳಿದಂತೆ ವಿದ್ಯುತ್ ಕೂಡ ದುರಸ್ತಿಯಲ್ಲಿದ್ದು ವಿದ್ಯುತ್ ತಂತಿಗಳು ಬಿದ್ದು ಮಳೆಗಾಲದ ಸಮಯದಲ್ಲಿ ಶಾಕ್ ಹೊಡೆಯುತ್ತದೆ ಎಂದು ದೂರಿದ್ದಾರೆ.ಗ್ರಾಮ ಪಂಚಾಯ್ತಿಯ ನಿರ್ಲಕ್ಷ್ಯ
ಮೇಲೊಂದು ಮೇಲೆ ಸಮಸ್ಯೆಯಲ್ಲೇ ಜೀವನ ದೂಡುತ್ತಿರುವ ಪೌರಕಾರ್ಮಿಕರ ಸಮಸ್ಯೆ ನಿವಾರಿಸುವಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ ಸಂಪೂರ್ಣ ವಿಫಲಗೊಂಡಿದೆ. ಎಷ್ಟು ಹೇಳಿದ್ರು, ಅವರ ಸಮಸ್ಯೆಯನ್ನು ಕಣ್ಣಾರೆ ಕಂಡರೂ ಇಚ್ಛಾಶಕ್ತಿ ಕೊರತೆಯಿಂದ ಸಮಸ್ಯೆ ನಿವಾರಿಸುವಲ್ಲಿ ಎಡವಿದೆ. ಹಲವು ವರ್ಷಗಳಿಂದ ಮನೆ ನಿರ್ಮಾಣದ ಬಗ್ಗೆ ಬೇಡಿಕೆ ಇಟ್ಟರೂ ಪಂಚಾಯ್ತಿ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ. ಪಂಚಾಯ್ತಿ ದಿಕ್ಕು ದೆಸೆ ಇಲ್ಲದಂತೆ ಕೆಲಸ ನಿರ್ವಹಿಸುತ್ತಿದೆ. ಕೋಟ್ಯಂತರ ಆದಾಯವಿದ್ದರೂ ಬಡ ಜನತೆಯ ಬಗ್ಗೆ ಕಾಳಜಿ ಕಂಡು ಬರುತ್ತಿಲ್ಲ. ಅಭಿವೃದ್ದಿಯಂತೂ ನಿಂತ ನೀರಾಗಿದೆ. ಪಂಚಾಯ್ತಿ ಅಧ್ಯಕ್ಷರ ಕೊಠಡಿ ಅರಮನೆಯಂತೆ ಕಂಗೊಳಿಸುತ್ತಿದೆ. ದೊಡ್ಡದಾದ ಕುರ್ಚಿ,ಮೇಜು, ಇವರಿಗೆ ಅವಶ್ಯಕತೆ ಇದೆ. ಆದರೆ ಪುರವನ್ನು ಸ್ವಚ್ಛಗೊಳಿಸುವ ಕಾರ್ಮಿಕರ ಮನೆಯ ಪರಿಸ್ಥಿತಿ ಹೇಳತೀರದ್ದಾಗಿದೆ.
ವಾರಕ್ಕೊಮ್ಮೆ ಪಂಚಾಯ್ತಿ ಅಧ್ಯಕ್ಷರು ಪಂಚಾಯ್ತಿಯಲ್ಲಿ ಸಿಕ್ಕಿದರೆ ಹೆಚ್ಚು.ಅಧ್ಯಕ್ಷರನ್ನು ನಿಭಾಯಿಸುವ ಕೆಲವು ಸದಸ್ಯರು ಅಭಿವೃದ್ದಿಯ ಬಗ್ಗೆ ಕಾಳಜಿ ವಹಿಸದೆ ಕೇವಲ ವೈಷಮ್ಯದ ರಾಜಕೀಯವನ್ನೇ ಮುಂದಿಟ್ಟುಕೊಂಡು ಒಬ್ಬರನೊಬ್ಬರು ಮುಖ ನೋಡದೆ ಕೆಲಸ ನಿರ್ವಹಿಸುತ್ತಿದ್ದಾರೆ. ಅಭಿವೃದ್ದಿ ದೃಷ್ಟಿಯಿಂದ ಆಯ್ಕೆ ಮಾಡಿ ಕಳುಹಿಸಿದ ಮತದಾರರು ಸದಸ್ಯರ ಕಾರ್ಯ ವೈಖರಿಯ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸುತ್ತಿದ್ದಾರೆ. ಪಂಚಾಯ್ತಿಗೆ ಇಂತಹ ದುರ್ಗತಿ ಬಂದೋಯ್ತಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಪೌರ ಕಾರ್ಮಿಕ ಮೃತಪಟರೂ ಸೌಜನ್ಯಕ್ಕಾದರೂ ಭೇಟಿ ನೀಡಿ ಕುಟುಂಬಸ್ಥರಿಗೆ ಶಾಂತ್ವನ ಹೇಳುವ ಪರಿಸ್ಥಿತಿಯಲ್ಲಿ ಯಾವ ಸದಸ್ಯರು ಇವರ ಜೋಪಡಿಯತ್ತ ಸುಳಿಯುತ್ತಿಲ್ಲ. ದುರ್ನಾತ ಬೀರುವದರಿಂದ ಇತ್ತ ಸದಸ್ಯರು ಸುಳಿಯುತ್ತಿಲ್ಲ. ಅಧ್ಯಕ್ಷರಂತೂ ಇಂತಹ ಸಂದರ್ಭದಲ್ಲಿ ಊರಿನಲ್ಲಿರುವದೇ ಅಪರೂಪ. ಇದ್ದರೂ ಇತ್ತ ಮುಖ ಮಾಡುವದಿಲ್ಲ. ನಮ್ಮಂತೆ ಇವರು ಮನುಷ್ಯರು ಎಂಬುದನ್ನು ಮರೆತ್ತಿದ್ದಾರೆ. ಒಟ್ಟಿನಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯರ ಹೊಂದಾಣಿಕೆ ಕೊರತೆ, ಇಚ್ಚಾಶಕ್ತಿಯ ಕೊರತೆಯಿಂದ ಪಂಚಾಯ್ತಿ ನರಳುತ್ತಿದೆ.
ಸ್ಥಳವಿದೆ, ಪ್ರಯೋಜನವಿಲ್ಲ
ಹಲವು ವರ್ಷಗಳಿಂದ ಮೃತ್ಯುಕೂಪದಲ್ಲಿ ಜೀವನ ಸಾಗಿಸುತ್ತಿರುವ ಪೌರ ಕಾರ್ಮಿಕರಿಗೆ ಸಮೀಪದಲ್ಲೇ ಮನೆ ನಿರ್ಮಾಣ ಮಾಡುವ ವಿಸ್ತಾರವಾದ ಜಾಗವಿದ್ದರೂ ಇದನ್ನು ಪಂಚಾಯ್ತಿಯ ಅಭಿವೃದ್ದಿಗೆಂದು ಮೀಸಲಿಟ್ಟಿದ್ದಾರೆ. ಪೌರ ಕಾರ್ಮಿಕರೇ ಇಲ್ಲದಿದ್ದಾಗ ಇವರ ಮೀಸಲಿಟ್ಟ ಸ್ಥಳವಾದರೂ ಯಾರಿಗೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಲಿ ಎಂಬದೇ ಕಳಕಳಿ.