ಸಿದ್ದಾಪುರ, ನ. 7 : ಪಂಚಾಯಿತಿಯ ಪರವಾನಗಿ ಇಲ್ಲದೆ ಕೋಳಿ ಮಾಂಸ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿಯೋರ್ವನ ಮೇಲೆ, ಸ್ಥಳೀಯ ಪೊಲೀಸ್ ಠಾಣೆಗೆ ಪಂಚಾಯಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಕೊಲೆ ಬೆದರಿಕೆ ಸೇರಿ ಪ್ರತ್ಯೇಕ ದೂರು ನೀಡಿದ ಘಟನೆ ನೆಲ್ಯಹುದಿಕೇರಿಯಲ್ಲಿ ನಡೆದಿದೆ.
ಘಟನೆಯ ವಿವರ : ಕಳೆದ ಕೆಲವು ದಿನಗಳ ಹಿಂದೆ, ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೆ ವ್ಯಾಪಾರ ನಡೆಸುತ್ತಿದ್ದ ಕೋಳಿ ಅಂಗಡಿಗಳಿಗೆ ಪಂಚಾಯಿತಿ ಆಡಳಿತ ಮಂಡಳಿಯಿಂದ ಬೀಗ ಜಡಿಯಲಾಗಿತ್ತು. ಇದಾದ ಕೆಲವು ದಿನಗಳಲ್ಲೇ ನೆಲ್ಯಹುದಿಕೇರಿಯ ಕೋಳಿ ಮಾಂಸ ವ್ಯಾಪಾರಿ ಶಿವದಾಸ್ ,ಮುದ್ರೆ ಹಾಕಿದ ಬೀಗ ಹೊಡೆದು ಕೋಳಿ ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿರುವದಾಗಿ ಪಂಚಾಯಿತಿಯ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯಾ ನೇತೃತ್ವದಲ್ಲಿ ಪಂಚಾಯಿತಿ ಆಡಳಿತ ಮಂಡಳಿಯು ತೆರಳಿ ಪರಶೀಲಿಸಿತು. ಈ ಸಂದರ್ಭ ಅಧ್ಯಕ್ಷೆ ಪದ್ಮಾವತಿ ಪರವಾನಿಗೆ ಇಲ್ಲದೆ, ಅಕ್ರಮವಾಗಿ ವ್ಯಾಪಾರ ನಡೆಸುತ್ತಿದ್ದ ಶಿವದಾಸ್ ಬಳಿ ಅಂಗಡಿಯನ್ನು ಮುಚ್ಚುವಂತೆ ಸೂಚಿಸಿದರು. ಈ ಸಂದರ್ಭ ಶಿವದಾಸ್ ಪದ್ಮಾವತಿ ಅವರನ್ನು ಅವಾಚ್ಯ ಶಬ್ದದಿಂದ ಸಾರ್ವಜನಿಕವಾಗಿ ನಿಂದಿಸಿ, ಕತ್ತಿ ಹಿಡಿದು ಕೊಲೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಅಲ್ಲದೆ ಪಂಚಾಯಿತಿ ಕಾರ್ಯದರ್ಶಿಗೂ ಅವಾಚ್ಯ ಶಬ್ದದಿಂದ ನಿಂದಿಸಿ ಹರಿಹಾಯ್ದಿರುವದಾಗಿ ಹೇಳಲಾಗಿದೆ.
ಕೋಳಿ ವ್ಯಾಪಾರಿ ಶಿವದಾಸ್ ತನಗೆ ಕೊಲೆ ಬೆದರಿಕೆ ಒಡ್ಡಿರುವದಾಗಿ ಆರೋಪಿಸಿ ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಹಾಗೂ ಪರವಾನಿಗೆ ಇಲ್ಲದೆ ವ್ಯಾಪಾರ ನಡೆಸಿರುವದಾಗಿ ಆರೋಪಿಸಿ ಶಿವದಾಸ್ ವಿರುದ್ಧ ಪ್ರತ್ಯೇಕ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಗ್ರಾಮದ ಪ್ರಥಮ ಪ್ರಜೆಯಾದ ಗ್ರಾ.ಪಂ. ಅಧ್ಯಕ್ಷೆಯನ್ನು ವ್ಯಕ್ತಿಯೋರ್ವನು ಸಾರ್ವಜನಿಕವಾಗಿ ನಿಂದಿಸಿರುವದು ಖಂಡನೀಯ. ಅಧ್ಯಕ್ಷೆಯನ್ನು ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪಂಚಾಯಿತಿ ಆಡಳಿತ ಮಂಡಳಿ ಆಗ್ರಹಿಸಿದೆ.