ಚೆಟ್ಟಳ್ಳಿ, ನ. 4: ಮಹಾ ಮಳೆಯಿಂದ ಕೊಡಗಿನ ಚಿತ್ರಣವೇ ಬದಲಾಗಿದ್ದ ವೇಳೆ ನೆರೆಸಂತ್ರಸ್ತರ ಸಹಾಯಕ್ಕಾಗಿ ನಮ್ಮ ಕೊಡಗು ತಂಡ ರಚಿತಗೊಂಡಿದ್ದು, ಇದೀಗ ನಮ್ಮ ಕೊಡಗು ತಂಡ ರಾಜ್ಯಮಟ್ಟದಲ್ಲಿ ನೋಂದಾವಣೆ ಗೊಂಡು ನಮ್ಮ ಕೊಡಗು ಚಾರಿಟೇಬಲ್ ಟ್ರಸ್ಟ್ ಆಗಿ ಹೊರಹೊಮ್ಮಿದೆ.
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಹಾಗೂ ಕಾರ್ಮಿಕರ ಒಕ್ಕೂಟ ಮತ್ತು ಐ.ಎನ್.ಟಿ.ಯು.ಸಿ ವತಿಯಿಂದ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ನಮ್ಮ ಕೊಡಗು ತಂಡದ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ನಮ್ಮ ಕೊಡಗು ತಂಡದ ಸಂಸ್ಥಾಪಕರಾದ ನೌಶಾದವರಿಗೆ ಸೇವಾ ರತ್ನ ಪ್ರಶಸ್ತಿ ನೀಡಲಾಗಿತ್ತು. ನಮ್ಮ ಕೊಡಗು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ ನಮ್ಮ ಕೊಡಗು ತಂಡದ ಸಂಸ್ಥಾಪಕರಾದ ನೌಶಾದ್.ಎಮ್.ಆರ್ (ಕುಶಾಲನಗರ) ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಮೋಕ್ಷಿತ ಗೌರವ್ ಪಟೇಲ್ (ಮಡಿಕೇರಿ), ಗೌರವಾಧ್ಯಕ್ಷರಾಗಿ ಜಾನ್ಸನ್ ಎ.ಜಿ (ಮುಳ್ಳುಸೋಗೆ), ಕಾರ್ಯದರ್ಶಿ ಯಾಗಿ ನಜ್ಮಾ ಬಾನು, ಖಜಾಂಚಿಯಾಗಿ ಲೋಹಿತ್ ಬಿ.ಬಿ (ಕುಶಾಲನಗರ), ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್ ಟಿ.ಎಂ. (ಬೆಂಗಳೂರು), ನಿರ್ದೇಶಕರುಗಳಾಗಿ ಜಿನ್ಹಾಸುದ್ದೀನ್ (ಸುಂಟಿಕೊಪ್ಪ), ಹೂವಯ್ಯ (ಸೋಮವಾರಪೇಟೆ), ಆಶೀಶ್, (ಬೋಯಿಕೇರಿ), ಶಾಂತ ಪ್ರಕಾಶ್, (ಕೊಡಗರಹಳ್ಳಿ), ಕಿರಣ್ (ಮಡಿಕೇರಿ) ನೇಮಕಗೊಂಡಿದ್ದಾರೆ.
ಈ ಕುರಿತು ಮಾತನಾಡಿದ ಎಂ.ಆರ್. ನೌಶಾದ್, ನೆರೆ ಪ್ರವಾಹದಲ್ಲಿ ಸಿಲುಕಿದ್ದವರಿಗೆ ಸಹಾಯ ಮಾಡುವ ಉದ್ದೇಶದಿಂದ ತಂಡವನ್ನು ರಚಿಸಿದ್ದು, ಜನರಿಂದ ಉತ್ತಮ ಸ್ಪಂದನೆ ಬಂದ ಕಾರಣ ನಮ್ಮ ಸಮಾಜ ಸೇವೆಯನ್ನು ಮುಂದುವರಿಸಲು ತೀರ್ಮಾನಿಸಿದ್ದು, ತಂಡವನ್ನು ರಾಜ್ಯಮಟ್ಟದಲ್ಲಿ ನೋಂದಾಯಿಸ ಲಾಗಿದೆ ಎಂದರು.