ಒಡೆಯನಪುರ, ನ. 4: ಸಮೀಪದ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆಯನ್ನು ಆಚರಿಸಲಾಯಿತು.
ರಾಷ್ಟ್ರೀಯ ಏಕತಾ ದಿನಾಚರಣೆಯ ಮಹತ್ವದ ಕುರಿತು ಶಾಲೆಯ ಸಹ ಶಿಕ್ಷಕ ಸಿ.ಎಸ್. ಸತೀಶ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಸ್ವತಂತ್ರ ಭಾರತದ ಪ್ರಪ್ರಥಮ ಗೃಹ ಮಂತ್ರಿ, ಉಪ ಪ್ರಧಾನ ಮಂತ್ರಿ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಉಕ್ಕಿನ ಮನುಷ್ಯ ಎಂದೆ ಪ್ರಸಿದ್ಧರಾದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ನಮ್ಮ ದೇಶದ ಏಕೀಕರಣಕ್ಕಾಗಿ ಹೋರಾಡಿದ ಧೀಮಂತ ವ್ಯಕ್ತಿಯಾಗಿದ್ದಾರೆ ಎಂದರು. ಸರ್ದಾರ್ ವಲ್ಲಭಬಾಯ್ ಪಟೇಲರು ರಾಷ್ಟ್ರವನ್ನು ಬಲಪಡಿಸಲು, ಭದ್ರತೆಯನ್ನು ಕಾಪಾಡಿ ಕೊಳ್ಳಲು ಮತ್ತು ಶಾಂತಿಯನ್ನು ಕದಡುವ ಬೆದರಿಕೆಗಳನ್ನು ತಡೆದು ರಾಷ್ಟ್ರದಲ್ಲಿ ಸ್ಥಿತಿ ಸ್ಥಾಪಕತ್ವವನ್ನು ಸ್ಥಾಪಿಸುವ ಸಲುವಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡರು. ಇಂತಹ ಮೇರು ವ್ಯಕ್ತಿಯ ಜನ್ಮದಿನವನ್ನು ದೇಶದೆಲ್ಲೆಡೆಯಲ್ಲಿ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ವಿದ್ಯಾರ್ಥಿ ಮತ್ತು ಯುವ ಸಮೂಹ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ಸೇರಿದಂತೆ ರಾಷ್ಟ್ರೀಯ ಏಕತೆಗಾಗಿ ಹೋರಾಡಿ ದಂತಹ ಮೇರು ವ್ಯಕ್ತಿಗಳನ್ನು ಆದರ್ಶ ವ್ಯಕ್ತಿಯನ್ನಾಗಿ ಮಾಡಿಕೊಳ್ಳಬೇಕು, ಈ ಮೂಲಕ ನಮ್ಮ ಸಮಾಜ ಹಾಗೂ ದೇಶದ ಏಕತೆಗಾಗಿ ಶ್ರಮಿಸುವಂತಹ ವ್ಯಕ್ತಿಯಾಗಿ ಬೆಳೆಯಬೇಕೆಂದರು.
ಈ ಸಂದರ್ಭ ವಿದ್ಯಾರ್ಥಿಗಳು ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆಗೆ ಪುಷ್ಪಗುಚ್ಚ ಅರ್ಪಿಸಿ, ಪ್ರತಿಮೆ ಮುಂಭಾಗದಲ್ಲಿ ನಾನು ರಾಷ್ಟ್ರದ ಐಕ್ಯತೆ, ಅಖಂಡತೆ ಮತ್ತು ಸುರಕ್ಷತೆಯನ್ನು ಕಾಪಾಡುವ ಸಲುವಾಗಿ ನನ್ನನ್ನು ನಾನು ಸರ್ಮಪಿಸಿಕೊಳ್ಳುತ್ತೇನೆ ಹಾಗೂ ಸರ್ದಾರ್ ವಲ್ಲಭಬಾಯ್ ಪಟೇಲರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣದ ಸ್ಪೂರ್ತಿಯನ್ನು ಕಾಪಾಡುತ್ತೇನೆಂಬ ಪ್ರತಿಜ್ಞೆ ವಿಧಿಯನ್ನು ಸ್ವೀಕರಿಸಿದರು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ಗುಜರಾತಿನ ನರ್ಮದಾ ನದಿ ದಂಡೆಯಲ್ಲಿ ನಿರ್ಮಾಣಗೊಂಡು ಏಕತಾ ದಿನದಂದು ಅನಾವರಣ ಗೊಂಡಿರುವ ವಿಶ್ವದಲ್ಲೇ ಅತೀ ಎತ್ತರದ ಪ್ರತಿಮೆ ಎಂದು ಕರೆಸಿಕೊಳ್ಳುವ 182 ಮೀಟರ್ ಎತ್ತರದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಏಕತೆಯ ಪ್ರತಿಮೆ ಕುರಿತು ಶಿಕ್ಷಕರು ಮಾಹಿತಿ ನೀಡಿದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್, ಪೋಷಕರು ಮತ್ತು ಗ್ರಾಮಸ್ಥರು ಹಾಜರಿದ್ದರು.
- ವಿ.ಸಿ. ಸುರೇಶ್, ಒಡೆಯನಪುರ.