ಮಡಿಕೇರಿ, ನ. 5: ನಾಡಿನ ಒಳಿತಿಗಾಗಿ ಜನರ ಶ್ರೇಯೋಭಿವೃದ್ಧಿಗಾಗಿ ಪುಣ್ಯನದಿ ಕರುನಾಡಿನ ಅನ್ನದಾತೆ ಕೊಡಗಿನ ಕುಲದೈವ ಪಾಪ ನಾಶಿನಿ ಮಾತೆ ಕಾವೇರಿ ಕ್ಷೇತ್ರದಲ್ಲಿ ಬಹುದೊಡ್ಡ ಧಾರ್ಮಿಕ ಕೈಂಕರ್ಯವಾದ ಅತಿರುದ್ರ ಮಹಾಯಾಗವನ್ನು ಮುಂದಿನ ಫೆಬ್ರವರಿ ತಿಂಗಳಿನಲ್ಲಿ ಹಮ್ಮಿಕೊಳ್ಳಲು ನಮಾಮಿ ಕಾವೇರಿ ಸಮಿತಿ ತೀರ್ಮಾನಿಸಿದೆ.ಅತಿರುದ್ರ ಮಹಾಯಾಗದ ಕುರಿತು ಸರ್ವರ ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಇಂದು ಬಾಲಭವನ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ನಮಾಮಿ ಕಾವೇರಿ ಸಮಿತಿಯ ಅಧ್ಯಕ್ಷ ಕೋಡಿ ಪೊನ್ನಪ್ಪ ಮಾತನಾಡಿ, ಕೊಡಗು ಸೇರಿದಂತೆ ದಕ್ಷಿಣ ಭಾರತದ ಹಲವೆಡೆ ಇತ್ತೀಚೆಗೆ ಪ್ರಾಕೃತಿಕ ವಿಕೋಪಗಳು ಸಂಭವಿಸಿವೆ. ಇದಕ್ಕೆ ಕಾರಣವೇನು ಎಂಬದನ್ನು ಹುಡುಕುತ್ತಾ ಹೋದಾಗ ಜೀವನದಿ ಕಾವೇರಿ ದುಃಖಿತಳಾಗಿದ್ದಾಳೆ. ಕಾವೇರಿಯ ಬಗ್ಗೆ ಜನರಲ್ಲಿ ಪೂಜ್ಯ ಭಾವನೆ ಕಡಿಮೆಯಾಗುತ್ತಿದೆ. ಕಾವೇರಿ ಕ್ಷೇತ್ರದಲ್ಲಿ ದೋಷಗಳಿವೆ. ಅವುಗಳನ್ನು ಹೋಗಲಾಡಿಸಿ (ಮೊದಲ ಪುಟದಿಂದ) ಕಾವೇರಿ ಹಾಗೂ ಈಶ್ವರನನ್ನು ಒಲಿಸಿಕೊಳ್ಳದಿದ್ದರೆ ಬಹುದೊಡ್ಡ ಗಂಡಾಂತರ ಎದುರಾಗಲಿದೆ ಎಂಬ ವಿಚಾರ ತಿಳಿದು ಬಂತು. ಈ ಹಿನ್ನೆಲೆಯಲ್ಲಿ ಕಾವೇರಿ ಕ್ಷೇತ್ರದಲ್ಲಿ ಅತಿರುದ್ರ ಮಹಾಯಾಗ ನಡೆಸಲು ತೀರ್ಮಾನಿಸಲಾಗಿದೆ. ಫೆ. 15 ರಿಂದ 23ರವರೆಗೆ ಯಾಗ ನಡೆಸಲು ನಿರ್ಧರಿಸಿದ್ದು, ಈ ಸಂಬಂಧ ಈಗಾಗಲೇ ಮೂರು ಕಡೆಗಳಲ್ಲಿ ಸ್ಥಳ ಹಾಗೂ ವಾಸ್ತು ಪರಿಶೀಲನೆ ಕೂಡ ನಡೆದಿದೆ. ಅತಿರುದ್ರ ಮಹಾಯಾಗದಿಂದ ನಾಡಿಗೆ ಒಳಿತಾಗಲಿದೆ ಎಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೆರಿಯಾನ ಗ್ರಾಮದ ಪುರೋಹಿತರಾದ ವಿಷ್ಣು ಪ್ರಸಾದ್ ಹೆಬ್ಬಾರ್ ಅವರ ಸಲಹೆಯಂತೆ ಯಾಗ ಹಮ್ಮಿಕೊಳ್ಳಲಾಗಿದೆ. ಅವರ ನೇತೃತ್ವದಲ್ಲೇ ಯಾಗ ನಡೆಯಲಿದೆ. 120 ಮಂದಿ ವೈದಿಕರು ಸೇರಿದಂತೆ ಸುಮಾರು 300 ಮಂದಿಯ ತಂಡ ಈ ಯಾಗವನ್ನು ನಡೆಸಿಕೊಡಲಿದೆ. ಇದಕ್ಕಾಗಿ ಸರ್ವರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.

ಆರ್‍ಎಸ್‍ಎಸ್‍ನ ಕುಟುಂಬ ಪ್ರಬೋಧನ್ ರಾಷ್ಟ್ರೀಯ ಸಂಯೋಜಕ ಕಜಂಪಾಡಿ ಸುಬ್ರಮಣ್ಯ ಭಟ್ ಅವರು ಮಾತನಾಡಿ, ಮಾತೆ ಕಾವೇರಿಗೆ ತನ್ನದೇ ಆದ ಮಹತ್ವವಿದೆ. ಅದರ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಅತಿರುದ್ರ ಮಹಾಯಾಗವನ್ನು ಎಲ್ಲರೂ ಸೇರಿ ನಡೆಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ. ಎಲ್ಲರನ್ನೂ ಒಗ್ಗೂಡಿಸಿ, ಎಲ್ಲರೂ ಭಾಗಿಗಳಾಗಿ ಯಾಗವನ್ನು ನಡೆಸುವ ಮೂಲಕ ನಾಡಿನ ಅಭಿವೃದ್ಧಿಗೆ ಸಂಕಲ್ಪ ತೊಡಬೇಕಿದೆ ಎಂದು ಹೇಳಿದರು.

ನಮಾಮಿ ಕಾವೇರಿ ಸಮಿತಿ ಮಾರ್ಗದರ್ಶಕ ಮಂಡಳಿ ಪ್ರಮುಖರಾದ ಕಾವೇರಿ ಕ್ಷೇತ್ರದ ಅರ್ಚಕರಾದ ನಾರಾಯಣಾಚಾರ್ ಹಾಗೂ ವಸಂತ್ ಭಟ್ ಹಾಗೂ ಚಕ್ಕೇರ ಮನು ಇವರುಗಳು ಮಾತನಾಡಿ, ಫೆ. 15 ರಿಂದ 23ರವರೆಗೆ ನಡೆಯಲಿರುವ ಅತಿರುದ್ರ ಮಹಾಯಾಗಕ್ಕೆ ಸರ್ವರ ಸಹಕಾರದ ಅಗತ್ಯವಿದೆ. ಯಾಗದ ಮಹಿಮೆ ಹಾಗೂ ರೂಪುರೇಷೆಯನ್ನು ಸರ್ವರಿಗೂ ಮನವರಿಕೆ ಮಾಡುವ ನಿಟ್ಟಿನಲ್ಲಿ ತಾ. 26 ರಂದು ವಿಷ್ಣು ಪ್ರಸಾದ್ ಹೆಬ್ಬಾರ್ ಅವರನ್ನು ಜಿಲ್ಲೆಗೆ ಕರೆಸಲಾಗುತ್ತದೆ. ಆ ಸಂದರ್ಭ ಎಲ್ಲರಿಗೂ ಯಾಗದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು, ರಾಜಕೀಯ ಪಕ್ಷಗಳ ಮುಖಂಡರು ನಾಗರಿಕರು ಭಾಗವಹಿಸಿದರು.