ಮಡಿಕೇರಿ, ನ. 5: ಕೊಡಗು ಜಿಲ್ಲೆಯಲ್ಲಿ ಅಂದಾಜು ಆರೆಂಟು ಸಾವಿರ ಎಕರೆಗಳಷ್ಟು ಮೀಸಲು ಸಂರಕ್ಷಿತ ಅರಣ್ಯ ಪ್ರದೇಶವನ್ನು ಶತಮಾನದ ಹಿಂದೆ ಬ್ರಿಟಿಷ್ ಸರಕಾರ ಖಾಸಗಿಯವರಿಗೆ ರಬ್ಬರ್ ಬೆಳೆಯಲೆಂದು ಗುತ್ತಿಗೆಗೆ ನೀಡಿದ್ದು, ಗುತ್ತಿಗೆ ಅವಧಿ ಮುಗಿದಿದ್ದರೂ ಕೂಡ ಸರಕಾರ ಮತ್ತು ಸಂಬಂಧಿಸಿದ ಇಲಾಖೆಗಳಿಂದ ಭೂಮಿ ಹಿಂಪಡೆಯದಿರುವ ಪ್ರಕರಣ ಬೆಳಕಿಗೆ ಬಂದಿದೆ. ಪರಿಣಾಮ ಖಾಸಗಿ ವ್ಯಕ್ತಿಗಳು ಈ ಸ್ವತ್ತನ್ನು ಪರಭಾರೆ ಮಾಡಿದ್ದಲ್ಲದೆ, ಕಂದಾಯ ಹಾಗೂ ಅರಣ್ಯ ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ದಾಖಲೆಗಳು ಕೂಡ ತಿದ್ದುಪಡಿಗೊಂಡಿರುವ ಅಂಶ ಬಹಿರಂಗಗೊಂಡಿದೆ.
ಕೊಡಗು ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿದ್ದ ಕಾಲಘಟ್ಟದ 1912ನೇ ಇಸವಿಯಲ್ಲಿ ಈಗಿನ ವೀರಾಜಪೇಟೆ ತಾಲೂಕು ಬೇಟೋಳಿ ಗ್ರಾ.ಪಂ. ವ್ಯಾಪ್ತಿಯ ಸಂರಕ್ಷಿತ ಮೀಸಲು ಅರಣ್ಯವನ್ನು ಪೋರ್ಚ್‍ಲ್ಯಾಂಡ್ ಎಂಬ ಕಂಪೆÀನಿ 99 ವರ್ಷ ರಬ್ಬರ್ ಬೆಳೆಯಲು ಗುತ್ತಿಗೆಗೆ ಪಡೆದಿದೆ. ಅಂತೆಯೇ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಡಮಕಲ್ ಮೀಸಲು ಅರಣ್ಯ ಭೂಮಿ ಹಾಗೂ ಸಂಪಾಜೆ ವ್ಯಾಪ್ತಿಯ ಮೀಸಲು ಅರಣ್ಯ ಸಹಿತ ನೀಲಂಬೂರು ಕಂಪೆನಿ ರಬ್ಬರ್ ಕೃಷಿಗಾಗಿ ಗುತ್ತಿಗೆ ಪಡೆದಿವೆ. ಹೀಗೆ ಒಟ್ಟು ಆರೆಂಟು ಸಾವಿರ ಎಕರೆ ಸಂರಕ್ಷಿತ ಅರಣ್ಯ ಅಂದು ಗುತ್ತಿಗೆ ಒಪ್ಪಂದದೊಂದಿಗೆ ಭಾರತ ಸರಕಾರದ ಬ್ರಿಟಿಷ್ ಹೈಕಮಿಷನರ್ ಶಿಫಾರಸ್ಸಿನಡಿ ಅನ್ಯರ ವಶವಾಗಿದೆ.
ಅನಂತರದ ವರ್ಷಗಳಲ್ಲಿ 99 ವರ್ಷಗಳ ಈ ಒಪ್ಪಂದ ಪತ್ರ ಕಂದಾಯ ಮತ್ತು ಅರಣ್ಯ ಇಲಾಖೆಗಳ ನಿರ್ಲಕ್ಷ್ಯ ಹಾಗೂ ಶಾಮೀಲು ಶಂಕೆಯೊಂದಿಗೆ 999 ವರ್ಷದ ಒಪ್ಪಂದವೆಂದು ನಕಲಿ ದಾಖಲೆ ಸೃಷ್ಟಿಸಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸಾಕಷ್ಟು ತಕರಾರುಗಳು ನಡೆದು, ಬ್ರಿಟಿಷ್ ಒಪ್ಪಂದದ ಮೂಲ ದಾಖಲೆ ಪರಿಶೀಲಿಸಲಾಗಿ, ಅದು ಕೇವಲ 99 ವರ್ಷಗಳ ಒಪ್ಪಂದವೆಂದೂ, ರಬ್ಬರ್ ಕೃಷಿಗೆ ಬಳಕೆಯಾಗುತ್ತಿರುವ ಜಾಗ ಸರಕಾರದ ಒಡೆನತದೆಂದೂ ಬಹಿರಂಗಗೊಂಡಿತ್ತು.
ಈ ನಡುವೆ ಒಳಗಿನಿಂದ ಒಳಗೆ ಕಂದಾಯ ಇಲಾಖೆ ಮಂದಿ ಶಾಮೀಲಾಗಿ, ಸರಕಾರದ ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿ ಸಾವಿರಾರು ಎಕರೆ ಜಾಗವನ್ನು ಸಣ್ಣ ಸಣ್ಣದಾಗಿ ವಿಭಾಗಿಸಿ ಮಾರಾಟದ ಯತ್ನ ಬೆಳಕಿಗೆ ಬಂದಿತ್ತು. ಪ್ರಕರಣ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರುವಂತಾಗಿ, ಒಟ್ಟಾರೆ ಸ್ವತ್ತು ಸರಕಾರದ ಮಾಲೀಕತ್ವದ್ದೆಂದು ದೃಢವಾಯಿತು.
ಪ್ರಕರಣಕ್ಕೆ ತಿರುವು: ಈ ನಡುವೆ ಮಾಕುಟ್ಟ ವ್ಯಾಪ್ತಿಯ ಪೋರ್ಚ್ ಲ್ಯಾಂಡ್ ರಬ್ಬರ್ ತೋಟದ ಮೂಲ ದಾಖಲೆ ಪರಿಶೀಲಿಸಲಾಗಿ 1908ರಲ್ಲಿ ಬ್ರಿಟಿಷ್ ಸರಕಾರವು ಮಾಕುಟ್ಟ ವ್ಯಾಪ್ತಿಯ ರುಟಿ ಹಾಗೂ ಉರುಟಿ ಮೀಸಲು ಅರಣ್ಯವನ್ನು ಖಾಸಗಿ ಯವರಿಗೆ ರಬ್ಬರ್ ಬೆಳೆಸಲು ನೀಡಿದ್ದರೂ, ಹಲವು ಷರತ್ತುಗಳನ್ನು ವಿಧಿಸಿರುವದು ಗೋಚರಿಸಿತು. ಮಾತ್ರವಲ್ಲದೆ, ಈಗ ಉಲ್ಲೇಖಿಸಿರುವ ಪೋರ್ಚ್‍ಲ್ಯಾಂಡ್ ಕಂಪೆನಿ ಹೆಸರು 1913ರ ವೇಳೆಗೆ ಕಾಣದ ಕೈಗಳಿಂದ ಸೇರ್ಪಡೆಗೊಂಡಿರುವ ಅಂಶ ಪತ್ತೆಯಾಯಿತು. ಇಲ್ಲಿ 1288.7 ಎಕರೆ ಬದಲಿಗೆ 1384 ಎಕರೆ ಉರುಟಿ - ರುಟಿ ಮೀಸಲು ಅರಣ್ಯ ರಬ್ಬರ್‍ಗಾಗಿ 99 ವರ್ಷ ಗುತ್ತಿಗೆ ನೀಡಲಾಗಿದೆ ಎಂದು ನಮೂದಾಗಿತ್ತು.
(ಸಶೇಷ)