ಶ್ರೀಮಂಗಲ, ನ. 5: ಕೊಡವರನ್ನು ನಿರ್ನಾಮ ಮಾಡುವ ಉದ್ದೇಶದಿಂದ ಸಹಸ್ರಾರು ಕೊಡವರ ಮಾರಣಹೋಮಕ್ಕೆ ಕಾರಣಕರ್ತನಾಗಿರುವ ಟಿಪ್ಪುವನ್ನು ವೈಭವಿಕರಿಸಿ ಆತನ ಜಯಂತಿ ಆಚರಣೆಗೆ ಮುಂದಾಗಿರುವ ಸರ್ಕಾರವು ಜನರ ಭಾವನೆಯನ್ನು ಅವಮಾನಿಸಿದೆ. ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ತಾ. 10 ರಂದು ಕರಾಳ ದಿನವನ್ನಾಗಿ ಆಚರಿಸಲು ಯುನೈಟೆಡ್ ಕೊಡವ ಆರ್ಗನೈಷೆಶನ್ (ಯುಕೊ) ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ಕರೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿರುವ ಅವರು ದೇವಾಟ್‍ಪರಂಬುವಿನಲ್ಲಿ ನಿರಾಯುಧರಾಗಿದ್ದ ಸಹಸ್ರಾರು ಸಂಖ್ಯೆಯ ಕೊಡವರನ್ನು ನರಮೇಧ ಮಾಡಿರುವದು ಅಕ್ಷಮ್ಯ ಅಪರಾಧ. ಈ ನೋವು ಮತ್ತು ದುಃಖ ಕೊಡವರ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದಿದೆ ಎಂದು ನೆನಪಿಸಿದ ಮಂಜುಚಿಣ್ಣಪ್ಪ, ಟಿಪ್ಪುವಿನ ಕ್ರೌರ್ಯ ಯಾವದೆ ಒಂದು

(ಮೊದಲ ಪುಟದಿಂದ) ಜಾತಿ-ಜನಾಂಗ, ಧರ್ಮಕ್ಕೆ ಸೀಮಿತವಾಗದೆ ಅದು ಮನುಕುಲದ ವಿರೋಧಿಯಾಗಿದೆ. ಕೊಡಗಿನ ಮಣ್ಣಿನಲ್ಲಿ ವಾಸಿಸುವ, ಇಲ್ಲಿನ ಗಾಳಿ ನೀರನ್ನು ಸೇವಿಸುವ ಪ್ರತಿಯೊಬ್ಬರೂ ತಾ. 10 ರಂದು ಕರಾಳ ದಿನವನ್ನಾಗಿ ಆಚರಣೆ ಮಾಡಬೇಕು ಎಂದು ಕರೆ ನೀಡಿದರು.

ಕೊಡಗಿನ ಜನತೆ ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಿ ಅಂಗಡಿಯ ಮುಂದೆ ಕಪ್ಪು ಬಾವುಟ ಕಟ್ಟುವಂತೆ ಹಾಗೂ ವಾಹನಗಳಲ್ಲಿ ಕಪ್ಪು ಬಾವುಟ ಹಾರಿಸುವದರ ಮೂಲಕ ಸಾಂಕೇತಿಕವಾಗಿ ವಿರೋಧಿಸುವಂತೆ ಮನವಿ ಮಾಡಿಕೊಳ್ಳಲಾಗುವದು. ಟಿಪ್ಪುಜಯಂತಿ ಆಚರಣೆ ಮಾಡಿದರೆ ದಂತಚೋರ ಹಾಗೂ ನರಹಂತಕ ವೀರಪ್ಪನ್‍ನ ಜನುಮ ಜಯಂತಿಯನ್ನು ಆಚರಿಸಬೇಕಾಗುತ್ತದೆ ಎಂದು ಮಂಜು ಚಿಣ್ಣಪ್ಪ ಎಚ್ಚರಿಸಿದರು.