ವೀರಾಜಪೇಟೆ, ಅ. 25: ಕೊಡಗು ಪ್ರಕೃತಿ ಹಾಗೂ ಕಾವೇರಿ ಮಾತೆಯ ತವರೂರು, ಇತ್ತೀಚಿಗೆ ಭಾರೀ ಮಳೆಯಿಂದಾಗಿ ಅನೇಕರು ಮನೆ-ಮಠ ಕಳೆದುಕೊಂಡಿದ್ದರೂ ಎಲ್ಲರ ಕಷ್ಟವನ್ನು ಪರಿಹರಿಸುವಂತಹ ಶಕ್ತಿ ಕಾವೇರಿ ತಾಯಿಗಿದೆ ಎಂದು ಮನಿಯಪಂಡ ಕಾಂತಿ ಸತೀಶ್ ಹೇಳಿದರು. ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದ್ದ ‘ಕಾವೇರಿ ತೀರ್ಥ ಪೂಜಾ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಡಗಿನ ಮೂಲದ ಪವಿತ್ರ ಕಾವೇರಿ ನದಿ ರಾಜ್ಯ ಹಾಗೂ ಹೊರ ರಾಜ್ಯಗಳಿಗೂ ನೀರು ಕೊಡುವಂತಹ ಶಕ್ತಿಯನ್ನು ಹೊಂದಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗೋಣಿಕೊಪ್ಪಲಿನ ಡಾ. ಕಾಳಿಮಾಡ ಶಿವಪ್ಪ ಮಾತನಾಡಿ, ಹಿಂದೂ ಸಮಾಜಗಳ ಎಲ್ಲಾ ಕಾರ್ಯಕ್ರಮಗಳು ಮಾತೆ ಕಾವೇರಮ್ಮನ ಸ್ಮರಣೆಯಲ್ಲೇ ನಡೆಯುತ್ತಿದೆ. ವiಹಿಳೆಯರು ತಮ್ಮ ಮನೆಯ ಜವಾಬ್ದಾರಿಯೊಂದಿಗೆ ಸಂಘ-ಸಂಸ್ಥೆಗಳ ಸೇವೆ ಮಾಡುತ್ತಿರುವದು ಉತ್ತಮ ಕಾರ್ಯ ಎಂದು ಹೇಳಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮೇವಂಡ ವಶ್ಮ ಕರುಂಬಯ್ಯ ಪೊಮ್ಮಕ್ಕಡ ಒಕ್ಕೂಟ ಉತ್ತಮ ಕಾರ್ಯಗಳನ್ನು ಮಾಡುತ್ತಿರುವದು ಶ್ಲಾಘನಿಯ ಎಂದರು. ತಾತಂಡ ಪ್ರತಾಪ್ ಬೆಳ್ಯಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ಚಲ್ಮಂಡ ಗೌರಿ, ಪಳೆಯಂಡ ಮನು ಸುಬ್ಬಯ್ಯ, ಪೊಯ್ಯಟೀರ ಭಾನು ಭೀಮಯ್ಯ, ಗೋಣಿಕೊಪ್ಪಲಿನ ಭಜನ ಮಂಡಳಿ ಸದಸ್ಯರಾದ ಯಶೋಧ ಚಂದ್ರಶೇಖರ್, ರಾಧಾಕೃಷ್ಣ, ಪುರೂ ಷೋತ್ತಮ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಗಣಪತಿ ಹೋಮ, ತೀರ್ಥ ಪೂಜಾ ಸೇವೆ ನಡೆಯಿತು. ಗೋಣಿಕೊಪ್ಪಲು ಉಮಾಮಹೇಶ್ವರಿ ಭಜನಾ ಮಂಡಳಿ ಸದಸ್ಯರಿಂದ ಭಕ್ತಿಗೀತೆ ಮತ್ತು ಭಜನೆ ನಡೆಯಿತು. ಕಾರ್ಯಕ್ರಮವನ್ನು ಬಯವಂಡ ಇಂದಿರಾ ಬೆಳ್ಳಿಯಪ್ಪ, ನಿರೂಪಿಸಿ, ಸ್ವಾಗತಿಸಿದರು.