ಮಡಿಕೇರಿ, ಅ. 25: ಸಾರ್ವಜನಿಕ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರಿಗೆ ಸಮಾನ ವೇತನ ಹಾಗೂ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಡಿಹೆಚ್‍ಒ ಕಚೇರಿ ಮುಂಭಾಗ ದಿಂದ ಘೋಷಣೆಗಳನ್ನು ಕೂಗುತ್ತಾ ಜಿ.ಟಿ.ಸರ್ಕಲ್ ಮೂಲಕ ಮೆರವಣಿಗೆ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಮಹಾದೇವಪ್ಪ, ಇಂದು ಆರೋಗ್ಯ ಇಲಾಖೆಯ ಎಲ್ಲಾ ಗುತ್ತಿಗೆ ನೌಕರರು ದೇಶವ್ಯಾಪಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ನಾವೂ ಕೂಡ ಹೋರಾಟವನ್ನು ಮಾಡುವ ಮೂಲಕ ಬೆಂಬಲವನ್ನು ನೀಡುತ್ತಿದ್ದೇವೆ. ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರ ಸಂಖ್ಯೆ ಖಾಯಂ ನೌಕರರಿಗಿಂತ ಹೆಚ್ಚಿದೆ.

ಆದರೆ ಜೀತ ವ್ಯವಸ್ಥೆಯ ಬದಲಾದ ರೂಪದಂತಿರುವ ಗುತ್ತಿಗೆ ಪದ್ಧತಿಯೇ ಒಂದು ಅಸಂವಿಧಾನಿಕ ವ್ಯವಸ್ಥೆಯಾಗಿದ್ದು 3 ತಿಂಗಳ ಬಾಂಡ್, ವರ್ಷಕ್ಕೊಂದು ಬ್ರೇಕ್ ಇನ್ ಸರ್ವೀಸ್ ಎದುರಿಸುತ್ತಿದ್ದಾರೆ. ಆದರೆ ಈ ವ್ಯವಸ್ಥೆಯನ್ನು ಬದಲುಗೊಳಿಸಿ 3 ತಿಂಗಳ ಬದಲು 5 ವರ್ಷ ಅಥವಾ 3 ವರ್ಷ ಬಾಂಡ್ ಬರೆಸಿಕೊಳ್ಳು ವಂತಾಗಬೇಕು. ಮಾತ್ರವಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರಿಗೆ 180 ದಿನಗಳ ವೇತನ ಸಹಿತ ಹೆರಿಗೆ ರಜೆಯನ್ನು ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ 250 ಮಂದಿ ಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಸೇವಾ ಭದ್ರತೆ ನೀಡಬೇಕು ಎಂದು ಒತ್ತಾಯಿಸಿ ದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸು ತ್ತಿರುವ ಗುತ್ತಿಗೆ ನೌಕರರು ಇಂದು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸುತ್ತಿ ದ್ದಾರೆ ಎಂದರು.

ಈ ಸಂದರ್ಭ ಪ್ರತಿಭಟನೆಗೆ ಆಗಮಿಸಿದ ವಕೀಲ ಮನೋಜ್ ಬೋಪಯ್ಯ ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವದು ಶೋಚನೀಯ ವ್ಯವಸ್ಥೆಯಾಗಿದೆ. ಗುತ್ತಿಗೆ ನೌಕರರ ಕಷ್ಟಗಳು, ಸಮಸ್ಯೆಗಳನ್ನು ನೋಡಿರುವ ತಾನು ಇಂದು ಅವರಿಗೆ ಬೆಂಬಲ ನೀಡುವ ಸಲುವಾಗಿ ಬಂದಿದ್ದೇನೆ. ಆರೋಗ್ಯ ಇಲಾಖೆಯಲ್ಲಿ ಸೇವೆ ಮಾಡುವದು ದೇಶಸೇವೆಗೆ ಸಮಾನವಾದುದ್ದು. ಆದರೆ ಇಂದು ಗುತ್ತಿಗೆ ನೌಕರರು ಜೀತದಾಳುಗಳಂತೆ ಗುರುತಿಸಿಕೊಳ್ಳುತ್ತಿದ್ದಾರೆ. ಇವರ ಈ ಹೋರಾಟಕ್ಕೆ ಬೆಂಬಲ ಎಂದೆಂದಿಗೂ ಇರುತ್ತದೆ ಎಂದು ನುಡಿದರು.

ಈ ಸಂದರ್ಭ ಪ್ರತಿಭಟನಾಕಾರರು ತಮ್ಮ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕೊಡಗು ಜಿಲ್ಲಾ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಸಂಘದ ಗೌರವಾಧ್ಯಕ್ಷ ಡಾ.ಡೆವಿನ್, ಉಪಾಧ್ಯಕ್ಷ ಕಿರಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಘು, , ಸಂಘಟನಾ ಕಾರ್ಯದರ್ಶಿ ಜಗದೀಶ್, ಅgಣ್ , ಮಹೇಶ್ ಹಾಗೂ ಪ್ರಮುಖರಾದ ಸುನಿತ, ಡಾ. ಪ್ರಾಣೇಶ್, ಡಾ.ರಕ್ಷಿತ್, ಡಾ.ಅಫ್ರಿನ್, ಡಾ. ಅರ್ಚನಾ ಮತ್ತಿತರರು ಪಾಲ್ಗೊಂಡಿದ್ದರು.