ಸೋಮವಾರಪೇಟೆ, ಅ. 25: ಇಲ್ಲಿನ ನ್ಯಾಯಾಲಯದ ಹಿಂಭಾಗ ಮತ್ತು ತಾಲೂಕಿನ ಮೂವತ್ತೊಕ್ಲಿನಲ್ಲಿ ನಡೆದಿದ್ದ ಶ್ರೀಗಂಧ ಮರ ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕರ ನೇತೃತ್ವದ ತಂಡ ಯಶಸ್ವಿಯಾಗಿದ್ದು, ಕೃತ್ಯಕ್ಕೆ ಬಳಕೆಯಾಗಿದ್ದ 3 ಕಾರುಗಳೊಂದಿಗೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮಾದಾಪುರ ಸಮೀಪದ ಮೂವತ್ತೊಕ್ಲು ಗ್ರಾಮದ ಮಧು ಎಂಬವರ ಮನೆಯ ಮುಂಭಾಗದಲ್ಲಿದ್ದ ಶ್ರೀಗಂಧದ ಮರವನ್ನು ಕಡಿದು, ಸಾಗಾಟಗೊಳಿಸಲು ಯತ್ನಿಸುತ್ತಿದ್ದ ಸಂದರ್ಭ ಸೋಮವಾರಪೇಟೆ ಪೊಲೀಸ್ ವೃತ್ತನಿರೀಕ್ಷಕ ನಂಜುಂಡೇ ಗೌಡ ನೇತೃತ್ವದ ಸಿಬ್ಬಂದಿಗಳ ತಂಡ ಧಾಳಿ ನಡೆಸಿದ್ದು, ಗರಗಂದೂರು ಗ್ರಾಮದ ಬಾಪುಟ್ಟಿ, ಲತೀಫ್, ಮಾದಾಪುರದ ಸುಜಿತ್ ಅವರುಗಳನ್ನು ಬಂಧಿಸಿದೆ.
ಇದರೊಂದಿಗೆ ಕೃತ್ಯಕ್ಕೆ ಬಳಸುತ್ತಿದ್ದ ಮೂರು ಮಾರುತಿ 800 ಕಾರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ ಸಂದರ್ಭ, ತಿಂಗಳ ಹಿಂದೆ ಸೋಮವಾರಪೇಟೆ ನ್ಯಾಯಾಲಯದ ಹಿಂಭಾಗದಿಂದ ಕಾಣೆಯಾಗಿದ್ದ ಶ್ರೀಗಂಧ ಕಳ್ಳತನ ಪ್ರಕರಣ ತೆರೆದುಕೊಂಡಿದೆ.
ಪಟ್ಟಣದ ನ್ಯಾಯಾಲಯ ಮತ್ತು ಮೂವತ್ತೊಕ್ಲು ಗ್ರಾಮದಿಂದ ಕಳ್ಳತನ ಮಾಡಿದ್ದ ಶ್ರೀಗಂಧದ ಮರಗಳನ್ನು ಕೊರಡುಗಳನ್ನಾಗಿಸಿ ಸಾಗಾಟ ಗೊಳಿಸುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆದಿದ್ದು, ಬಂದಿತರಿಂದ ಸುಮಾರು 10 ಕೆ.ಜಿ.ಯಷ್ಟು ಶ್ರೀಗಂಧವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ವೃತ್ತನಿರೀಕ್ಷಕರ ಕಚೇರಿಯ ಸಿಬ್ಬಂದಿಗಳಾದ ಮಹದೇವಸ್ವಾಮಿ, ಕುಮಾರಸ್ವಾಮಿ, ಅನಂತ್‍ಕುಮಾರ್, ಮಂಜುನಾಥ್, ಪ್ರವೀಣ್, ಮಧುಕುಮಾರ್ ಅವರುಗಳು ಭಾಗವಹಿಸಿದ್ದರು.