ಸೋಮವಾರಪೇಟೆ, ಅ. 25: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಬಳಿ ಸ್ಥಗಿತಗೊಂಡಿರುವ ಶತಮಾನೋತ್ಸವ ಭವನದ ಮುಂದುವರಿದ ಕಾಮಗಾರಿಯನ್ನು ಪ್ರಾರಂಭಿಸಲು ಸರ್ಕಾರದ ಮಟ್ಟದಲ್ಲಿ ವ್ಯವಹರಿಸಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಬಿ.ಎ. ಜೀವಿಜಯ ಹೇಳಿದರು.

ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನುದಾನದ ಕೊರತೆಯಿಂದ ಸ್ಥಗಿತಗೊಂಡಿರುವ ಶತಮಾನೋತ್ಸವ ಭವನ ಕಾಮಗಾರಿಗೆ ಅನುದಾನ ಒದಗಿಸುವ ಬಗ್ಗೆ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಲಾಗಿದೆ ಎಂದರು. ಸಮಾಜದಲ್ಲಿ ಗುರುವಿನ ಸ್ಥಾನ ಶ್ರೇಷ್ಠವಾದುದು. ಸಮಾಜದಲ್ಲಿ ಓರ್ವ ವ್ಯಕ್ತಿಯ ಯಾವದೇ ಕ್ಷೇತ್ರದಲ್ಲಾದರೂ ಉನ್ನತ ಸ್ಥಾನವನ್ನು ಪಡೆದಿದ್ದಾನೆ ಎಂದರೆ ಅದು ಶಿಕ್ಷಕರ ಬಳುವಳಿ. ಅದರಲ್ಲು ಪ್ರಾಥಮಿಕ ಹಂತದಲ್ಲಿ ಶಿಕ್ಷಣವನ್ನು ನೀಡುವ ಶಿಕ್ಷಕರ

ಜವಾಬ್ದಾರಿ ಮಹತ್ತರವಾದುದು ಎಂದರು.

ನಿವೃತ್ತ ಶಿಕ್ಷಕರಾದ ಹಾಲೇಬೇಲೂರು ನಿರ್ವಾಣಿಶೆಟ್ಟಿ, ಎಚ್.ಆರ್. ದಾಮೋಧರ್, ಎಚ್.ಎನ್. ತಂಗಮ್ಮ, ಎ.ಯು. ಚೋಂದಮ್ಮ, ಡಿ.ಎಂ.ಸದಾಶಿವಪ್ಪ ಹಾಗು ಪದವೀಧರ ಮುಖ್ಯಶಿಕ್ಷಕಿ ಎಂ.ಜೆ. ಅಣ್ಣಮ್ಮ ಅವರನ್ನು ಸನ್ಮಾನಿಸಲಾಯಿತು.

ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಬಿ.ಬಿ. ತಿಮ್ಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ವೇದಿಕೆಯಲ್ಲಿ ಜಿ.ಕೆ. ರುದ್ರಪ್ಪ, ಎ.ಪಿ. ಶಂಕರಪ್ಪ, ಎ.ಆರ್. ಮುತ್ತಣ್ಣ, ಸಿ.ಕೆ. ರಾಘವ ಇದ್ದರು. ಶಾಲೆ ಬೆಳೆದು ಬಂದ ಹಾದಿಯ ಕುರಿತು ಎಸ್.ಎ. ಮುರುಳೀಧರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್.ಡಿ. ವಿಜೇತ್ ಮತ್ತು ಮಾಟ್ನಳ್ಳಿ ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು.