ಶ್ರೀಮಂಗಲ, ಅ. 21: ಶ್ರೀಮಂಗಲ ಠಾಣಾ ವ್ಯಾಪ್ತಿಯ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿಯ ವೆಸ್ಟ್‍ನೆಮ್ಮಲೆ ಗ್ರಾಮದಲ್ಲಿ ಹುಲಿ ಧಾಳಿಗೆ ಹಸುವೊಂದು ಬಲಿಯಾಗಿದೆ.
ಗ್ರಾಮ ಪಂಚಾಯಿತಿ ಸದಸ್ಯ ಚೊಟ್ಟೆಯಂಡಮಾಡ ಉದಯ ತಮಗೆ ಸೇರಿದ ಹಸುವನ್ನು ಮನೆಯ ಸಮೀಪ ಕಟ್ಟಿದ್ದರು. ಶನಿವಾರ ರಾತ್ರಿ ಪೊನ್ನಂಪೇಟೆಯಲ್ಲಿ ಕುಟುಂಬದ ಮದುವೆ ಇದ್ದುದ್ದರಿಂದ ಸಂಸಾರ ಸಹಿತ ಮನೆಯವರು ಮದುವೆಗೆ ತೆರಳಿದ್ದರು.
ರಾತ್ರಿ ಮದುವೆಯಿಂದ ಆಗಮಿಸಿದ ವೇಳೆ ಹಸು ಕಾಣದಿದ್ದಾಗ ರಾತ್ರಿ ಹುಡುಕಲು ಸಾಧ್ಯವಾಗದೇ ಇಂದು ಬೆಳಿಗ್ಗೆ ಗಮನಿಸಿದಾಗ ಸ್ಥಳದಲ್ಲಿ ರಕ್ತದ ಗುರುತು ಪತ್ತೆಯಾಗಿದೆ. ತುಸು ದೂರದ ಕಾಫಿ ತೋಟಕ್ಕೆ ಹಸುವನ್ನು ಹುಲಿ ಎಳೆದೊಯ್ದು ತಿಂದಿರುವದು ಗೋಚರಿಸಿದೆ.
ಸ್ಥಳಕ್ಕೆ ಶ್ರೀಮಂಗಲ ವನ್ಯಜೀವಿ ವಲಯಾಧಿಕಾರಿ ವೀರೇಂದ್ರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.