ಸೋಮವಾರಪೇಟೆ, ಅ.20: ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ 11 ವಾರ್ಡ್‍ಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ 28 ನಾಮಪತ್ರಗಳ ಪೈಕಿ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಎಸ್. ಮಹೇಶ್ ಮತ್ತು ಮನೋಹರ್ ತಮ್ಮ ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ ನಾಲ್ವರು ಪಕ್ಷೇತರರೂ ಸೇರಿದಂತೆ ಒಟ್ಟು 26 ಮಂದಿ ಕಣದಲ್ಲಿ ಉಳಿದಿದ್ದಾರೆ.

ಮಹಾಪ್ರವಾಹದಿಂದ ಮುಂದೂಡಲ್ಪಟ್ಟಿದ್ದ ಪಟ್ಟಣ ಪಂಚಾಯಿತಿ ಚುನಾವಣಾ ಪ್ರಕ್ರಿಯೆ ತಾ. 16ರಿಂದ ಪ್ರಾರಂಭಗೊಂಡಿದ್ದು, ತಾ. 20 ರಂದು ನಾಮಪತ್ರಗಳನ್ನು ವಾಪಸ್ ಪಡೆಯಲು ದಿನಾಂಕ ನಿಗದಿಯಾಗಿತ್ತು. ಅದರಂತೆ ಇಂದು ಅಪರಾಹ್ನ 3 ಗಂಟೆ ವೇಳೆಗೆ ವಾರ್ಡ್ 1 ರಿಂದ ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಎಸ್. ಮಹೇಶ್ ಮತ್ತು ವಾರ್ಡ್ 8 ರಿಂದ ನಾಮಪತ್ರ ಸಲ್ಲಿಸಿದ್ದ ಮನೋಹರ್ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.

ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು: 1ನೇ ವಾರ್ಡ್ (ಬಸವೇಶ್ವರ ರಸ್ತೆ) ಬಿಜೆಪಿಯಿಂದ ಕೆ.ಜಿ. ಸುರೇಶ್, ಕಾಂಗ್ರೆಸ್‍ನಿಂದ ಉದಯಶಂಕರ್, 2ನೇ ವಾರ್ಡ್ (ಬಾಣಾವಾರ ರಸ್ತೆ) ಬಿಜೆಪಿಯಿಂದ ಪಿ.ಕೆ. ಚಂದ್ರು, ಕಾಂಗ್ರೆಸ್‍ನಿಂದ ಮಂಜುನಾಥ್, ಪಕ್ಷೇತರರಾಗಿ ರಘುನಾಥ್ ಕಣದಲ್ಲಿ ಉಳಿದಿದ್ದಾರೆ.

3ನೇ ವಾರ್ಡ್ (ವೆಂಕಟೇಶ್ವರ ಬ್ಲಾಕ್) ಬಿಜೆಪಿಯಿಂದ ನಳಿನಿ ಗಣೇಶ್, ಜೆಡಿಎಸ್‍ನಿಂದ ಕೆ.ಎಂ. ಪುಷ್ಪ, ಪಕ್ಷೇತರರಾಗಿ ನೀಲಾವತಿ, 4ನೇ ವಾರ್ಡ್ (ರೇಂಜರ್ ಬ್ಲಾಕ್-1ನೇ ಹಂತ) ಬಿಜೆಪಿಯಿಂದ ಎನ್.ಎಸ್. ಮೂರ್ತಿ, ಕಾಂಗ್ರೆಸ್‍ನಿಂದ ಸಂಜೀವ, 5ನೇ ವಾರ್ಡ್ (ದೇವಸ್ಥಾನ ರಸ್ತೆ) ಬಿಜೆಪಿಯಿಂದ ಬಿ.ಎಂ. ಸುರೇಶ್, ಕಾಂಗ್ರೆಸ್‍ನಿಂದ ಬಿ.ಸಿ. ವೆಂಕಟೇಶ್, 6ನೇ ವಾರ್ಡ್ (ವಿಶ್ವೇಶ್ವರಯ್ಯ ಬ್ಲಾಕ್) ಬಿಜೆಪಿಯಿಂದ ವಿಜಯಲಕ್ಷ್ಮೀ ಸುರೇಶ್, ಕಾಂಗ್ರೆಸ್‍ನಿಂದ ಶೀಲಾ ಡಿಸೋಜ, 7ನೇ ವಾರ್ಡ್ (ರೇಂಜರ್ ಬ್ಲಾಕ್ 2ನೇ ಹಂತ) ಬಿಜೆಪಿಯಿಂದ ದಾಕ್ಷಾಯಿಣಿ, ಜೆಡಿಎಸ್‍ನಿಂದ ಜೀವನ್, 8ನೇ ವಾರ್ಡ್ (ಜನತಾ ಕಾಲೋನಿ) ಬಿಜೆಪಿಯಿಂದ ಪ್ರಮೋದ್, ಜೆಡಿಎಸ್‍ನಿಂದ ವೆಂಕಟೇಶ್, ಪಕ್ಷೇತರರಾಗಿ ಶುಭಕರ್ ಅವರುಗಳು ಸ್ಪರ್ಧಾ ಕಣದಲ್ಲಿದ್ದಾರೆ.

9ನೇ ವಾರ್ಡ್ (ಸಿದ್ಧಲಿಂಗೇಶ್ವರ ಬ್ಲಾಕ್) ಬಿಜೆಪಿಯಿಂದ ಅನಿತಾ, ಜೆಡಿಎಸ್‍ನಿಂದ ನಾಗರತ್ನ, 10ನೇ ವಾರ್ಡ್ (ಮಹದೇಶ್ವರ ಬ್ಲಾಕ್) ಬಿಜೆಪಿಯಿಂದ ದಿವ್ಯಾ ಮೋಹನ್, ಜೆಡಿಎಸ್‍ನಿಂದ ಜಯಂತಿ ಶಿವಕುಮಾರ್, ಪಕ್ಷೇತರ ಅಭ್ಯರ್ಥಿಯಾಗಿ ಗೀತಾ ಹರೀಶ್, 11ನೇ ವಾರ್ಡ್ (ಸಿ.ಕೆ. ಸುಬ್ಬಯ್ಯ ರಸ್ತೆ) ಬಿಜೆಪಿಯಿಂದ ಬಿ.ಆರ್. ಮಹೇಶ್, ಕಾಂಗ್ರೆಸ್‍ನಿಂದ ಕೆ.ಎ. ಆದಂ ಚುನಾವಣೆ ಎದುರಿಸಲಿದ್ದಾರೆ.

11 ವಾರ್ಡ್‍ಗಳ ಪೈಕಿ ಬಿಜೆಪಿಗೆ 3 ಹಾಗೂ ಕಾಂಗ್ರೆಸ್‍ಗೆ 1 ವಾರ್ಡ್‍ನಲ್ಲಿ ಬಂಡಾಯದ ಬಿಸಿ ತಟ್ಟಿದೆ. ವಾರ್ಡ್ 2ರಲ್ಲಿ ಕಳೆದ ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಜಯಗಳಿಸಿದ್ದ ಮೀನಾಕುಮಾರಿ ಅವರ ಪತಿ ರಘುನಾಥ್ ಕಣದಲ್ಲಿ ಉಳಿದಿದ್ದರೆ, ವಾರ್ಡ್ 3, 8 ಮತ್ತು 10ರಲ್ಲಿ ಬಿಜೆಪಿಗೆ ಬಂಡಾಯವಾಗಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ.ಪಂ. ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು 6 ಹಾಗೂ ಜೆಡಿಎಸ್ ಅಭ್ಯರ್ಥಿಗಳು 5 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದಾರೆ. ಬಿಜೆಪಿ ಹುರಿಯಾಳುಗಳು 11 ವಾರ್ಡ್‍ನಿಂದಲೂ ಕಣಕ್ಕಿಳಿದಿದ್ದು, ಬಂಡಾಯದ ಬೇಗುದಿಯೊಂದಿಗೆ ಮೈತ್ರಿಕೂಟದ ಎದುರು ಹೋರಾಟಕ್ಕೆ ಸಿದ್ಧವಾಗಿದ್ದಾರೆ.