ಮಡಿಕೇರಿ, ಅ.18: ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿರುವ ಐತಿಹಾಸಿಕ ದಸರಾ ನಾಡಹಬ್ಬ ಉತ್ಸವವು ತಾ. 19 ರಂದು ರಾತ್ರಿ ಮಡಿಕೇರಿ ನಗರದಲ್ಲಿ ನಡೆಯಲಿದೆ. ಈ ಪ್ರಯುಕ್ತ ನಗರದ ಪ್ರಮುಖ ಹತ್ತು ದೇವಸ್ಥಾನಗಳಿಂದ ವಿದ್ಯುತ್ ದೀಪಾಲಂಕೃತ ಮಂಟಪದೊಂದಿಗೆ ಹಾಗೂ ನಾಲ್ಕು ಪ್ರಮುಖ ದೇವಸ್ಥಾನದ ಕರಗ ದೇವತೆಗಳೊಂದಿಗೆ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಹಮ್ಮಿಕೊಂಡಿರುತ್ತಾರೆ. ಹತ್ತು ಮಂಟಪಗಳ ಮತ್ತು ನಾಲ್ಕು ಕರಗ ದೇವತೆಗಳ ಮೆರವಣಿಗೆಯು ತಾ. 19 ರ ರಾತ್ರಿ 8 ಗಂಟೆಯ ನಂತರ ಸಂಬಂಧಪಟ್ಟ ದೇವಸ್ಥಾನದಿಂದ ಪ್ರಾರಂಭವಾಗಿ ತಾ. 20 ರ ಬೆಳಿಗ್ಗೆ ಮಡಿಕೇರಿ ನಗರದ ಎವಿ ಶಾಲೆಯ ಬಳಿ ಇರುವ ಬನ್ನಿಮಂಟಪಕ್ಕೆ ತೆರಳಿ ನಂತರ ವಾಪಾಸು ಆಯಾಯಾ ದೇವಸ್ಥಾನಕ್ಕೆ ಹಿಂತಿರುಗಲಿರುತ್ತದೆ. ದಸರಾ ಮೆರವಣಿಗೆ ಮತ್ತು ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಲು ಜಿಲ್ಲೆ, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಕರು, ಸಾವಿರಾರು ವಾಹನಗಳು ಹಾಗೂ ಮೈಸೂರು ನಗರದ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾರ್ವಜನಿಕರು ಮೈಸೂರು ದಸರಾ ಮೆರವಣಿಗೆ ಮುಗಿದ ನಂತರ ಮಡಿಕೇರಿಯ ದಸರಾ ಉತ್ಸವಕ್ಕೆ ಆಗಮಿಸಲಿದ್ದಾರೆ. ಈ ಸಂಬಂಧ ಮುಂಜಾಗ್ರತಾ ಕ್ರಮಕ್ಕಾಗಿ ನಾಡಹಬ್ಬ ದಸರಾ ಉತ್ಸವವು ಶಾಂತ ರೀತಿಯಲ್ಲಿ ಆಚರಿಸಲು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ ಸಂಚಾರಕ್ಕಾಗಿ ತಾತ್ಕಾಲಿಕವಾಗಿ ವಾಹನ ಸಂಚಾರದ ಮಾರ್ಗ ಬದಲÁವಣೆ ಮಾಡಲಾಗುವದು. ಮಡಿಕೇರಿ ನಗರದಲ್ಲಿ ನಡೆಯಲಿರುವ ದಸರಾ ಮಂಟಪಗಳ ಮೆರವಣಿಗೆ ಸಂದರ್ಭದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮ 1989ರ (ತಿದ್ದುಪಡಿ ನಿಯಮಾವಳಿ 1990) ನಿಯಮ 221ಎ (5) ರಲ್ಲಿ ದತ್ತವಾದ ಅಧಿಕಾರದಂತೆ ತಾ. 19 ರ ಸಂಜೆ 4 ಗಂಟೆಯಿಂದ ತಾ. 20 ರ ಬೆಳಗ್ಗೆ 10 ಗಂಟೆಯವರೆಗೆ ರಾಷ್ಟ್ರೀಯ ಹೆದ್ದಾರಿ 275 ಹೊರತುಪಡಿಸಿ, ಮಡಿಕೇರಿ ನಗರದೊಳಗೆ ಯಾವದೇ ವಾಹನಗಳು ಪ್ರವೇಶಿಸುವದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ.