ಕುಶಾಲನಗರ, ಅ. 17: ಕುಶಾಲ ನಗರದ ಸಾಯಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಾಯಿ ಮಂದಿರದಲ್ಲಿ ಶಿರಡಿ ಸಾಯಿಬಾಬಾ ಅವರ ದಿವ್ಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಮಂದಿರದಲ್ಲಿ ಸುಪ್ರಭಾತ ಸೇವೆ, ವಾಸ್ತು ಸೇವೆ ಮಹಾಸಂಕಲ್ಪ ಸಿಂಹ ಲಗ್ನದಲ್ಲಿ ಸದ್ಗುರು ಶ್ರೀ ಶಿರಡಿ ಸಾಯಿಬಾಬಾ ಅವರ ದಿವ್ಯ ವಿಗ್ರಹ ಪ್ರತಿಷ್ಠಾಪನೆಯನ್ನು ನೆರವೇರಿಸಲಾಯಿತು. ಹುಣಸೂರು ತಾಲೂಕಿನ ಗಾವಡಗೆರೆಯ ಶ್ರೀ ನಟರಾಜ ಸ್ವಾಮೀಜಿ ಮತ್ತು ವೀರಾಜಪೇಟೆ ತಾಲೂಕಿನ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ದೇವಾಲಯದ ಗೋಪುರದ ಮೇಲೆ ಕುಂಭಾಭಿಷೇಕ ನೆರವೇರಿಸಲಾಯಿತು.
ಬಳಿಕ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಅರಮೇರಿಯ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಆಧುನಿಕ ಜೀವನ ಶೈಲಿಯ ಪದ್ಧತಿಯಲ್ಲಿ ಪ್ರತಿಯೊಬ್ಬರು ಒತ್ತಡದಲ್ಲಿ ಸಿಲುಕಿದ್ದಾರೆ. ನಾವೆಲ್ಲರೂ ಒತ್ತಡದಿಂದ ಹೊರಬಂದು ಉತ್ತಮ ಬದುಕು ಕಟ್ಟಿಕೊಳ್ಳಲು ಆಧ್ಯಾತ್ಮಿಕ ಚಿಂತನೆ ಅತಿ ಅಗತ್ಯ ಎಂದರು. ಶಿರಡಿ ಸಾಯಿಬಾಬಾ ಅವರ ಭಕ್ತರು ಇಂದು ಹಳ್ಳಿಗಳು ಹಾಗೂ ನಗರ ಪ್ರದೇಶಗಳಲ್ಲಿ ಕೋಟ್ಯಾಂತರ ಸಂಖ್ಯೆಯಲ್ಲಿದ್ದಾರೆ. ಸಾಯಿ ಬಾಬಾರವರು ಪ್ರತಿಯೊಬ್ಬ ಭಕ್ತರನ್ನು ಅನುಗ್ರಹಿಸುವದು ಕಾರಣವಾಗಿದೆ ಎಂದು ನಾವೆಲ್ಲರೂ ಬಾಹ್ಯದ ಸುಖಕ್ಕೆ ಹೆಚ್ಚು ಒತ್ತು ಕೊಡದೆ ಅಂತರಂಗದ ಸುಖಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಆ ಮೂಲಕ ಆತ್ಮಸಂಸ್ಕಾರ ಹೊಂದಬಹುದಾಗಿದೆ. ಇದಕ್ಕೆ ಆಧ್ಯಾತ್ಮಿಕ ನೆಲೆ ಅತಿ ಅಗತ್ಯ. ಭಗವಂತನ ಆಶೀರ್ವಾದ ಪುಣ್ಯದ ಫಲ. ಪುಣ್ಯ ಎಂದರೆ ನಮ್ಮೊಳಗೆ ಅಂತರ್ಗತವಾಗಿ ಇರುವಂತಹದ್ದು. ಅಂತಹ ಸಾಕ್ಷಾತ್ಕಾರವನ್ನು ನಾವೆಲ್ಲರೂ ಪಡೆಯಲು ದೇವ ಮಂದಿರಗಳಿಗೆ ಹೆಚ್ಚು ತೆರಳಬೇಕೆಂದು ಕರೆಕೊಟ್ಟರು. ದೇವಾಲಯದ ಧರ್ಮದರ್ಶಿ ಧರೇಶ್ ಬಾಬು, ಪ್ರಮುಖರಾದ ಶ್ರೀಪತಿ, ಜಿ.ಎಲ್. ನಾಗರಾಜು, ಎಂ.ಕೆ. ದಿನೇಶ್, ಕೆ.ಪಿ. ಚಂದ್ರಶೇಖರ್, ನಂಜುಂಡಸ್ವಾಮಿ, ಅಮೃತ್ರಾಜ್ ಮತ್ತಿತರರು. ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ಪ್ರಸಾದ ವಿನಿಯೋಗ ನಡೆಯಿತು.
ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾದಿಗಳು ದೇವರ ದರ್ಶನ ಪಡೆದು ಕಳಶಾಭಿಷೇಕ ನೆರವೇರಿಸಿದರು.