ಮಡಿಕೇರಿ, ಅ. 17: ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದಲ್ಲಿ ಆಸಕ್ತಿ ಮೂಡಿಸುವದರೊಂದಿಗೆ ಅವರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ ಕರೆ ನೀಡಿದರು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿ ಹಾಗೂ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದೊಂದಿಗೆ “ಸ್ವಚ್ಛ, ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು” ಎಂಬ ಕೇಂದ್ರ ವಿಷಯದ ಅಂಗವಾಗಿ ನಡೆಯಲಿರುವ 26ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ-2018 ಕ್ಕೆ ಪೂರ್ವಭಾವಿಯಾಗಿ ನಗರದ ರೋಟರಿ ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಿದ್ದ ಕೊಡಗು ಜಿಲ್ಲಾಮಟ್ಟದ ಮಾರ್ಗದರ್ಶಿ ಶಿಕ್ಷಕರ ಕಾರ್ಯಾ ಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ವಿಜ್ಞಾನ ಸಮಾವೇಶ ಶಾಲಾ ಮಕ್ಕಳಿಗೆ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಭವಿಷ್ಯದ ವಿಜ್ಞಾನಿಗಳಾಗಿ ರೂಪಿಸಲು ಉತ್ತಮ ವೇದಿಕೆ ಒದಗಿಸುತ್ತದೆ ಎಂದರು. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಬೇಕು ಹಾಗೂ ಸಮಾಜದಲ್ಲಿ ಬೇರೂರಿರುವ ಕಂದಾಚಾರ ಮತ್ತು ಮೌಢ್ಯ ನಿವಾರಣೆಗೆ ತೊಡಗಬೇಕು ಎಂದರು. ರಾಜ್ಯ ವಿಜ್ಞಾನ ಪರಿಷತ್‍ನ ವಿಜ್ಞಾನ ಚಟುವಟಿಕೆಗಳು ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿವೆ ಎಂದು ಡಿಡಿಪಿಐ ಮಚ್ಚಾಡೋ ಹೇಳಿದರು.

ಸಮಾವೇಶದ ಕೈಪಿಡಿ ಬಿಡುಗಡೆಗೊಳಿಸಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್, ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಶಿಕ್ಷಕರು ಮಕ್ಕಳಿಂದ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ಅನ್ವಯದ ಮೂಲಕ ಸ್ವಚ್ಛ, ಹಸಿರು ಮತ್ತು ಆರೋಗ್ಯ ವಿಷಯಕ್ಕೆ ಸಂಬಂಧಿಸಿದ ವೈಜ್ಞಾನಿಕ ಪ್ರಬಂಧ ತಯಾರಿಸಲು ಸೂಕ್ತ ತರಬೇತಿ ನೀಡಬೇಕು ಎಂದರು. ಶಿಕ್ಷಕರು ಮಕ್ಕಳಲ್ಲಿ ಪರಿಸರ ಸ್ನೇಹಿ ಚಟುವಟಿಕೆ ಗಳನ್ನು ಕೈಗೊಳ್ಳುವ ಮೂಲಕ ಅವರನ್ನು ಭವಿಷ್ಯದ ಪರಿಸರ ಸಂರಕ್ಷಕರಾಗಿ ರೂಪುಗೊಳಿಸಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್, ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ವಿದ್ಯಾರ್ಥಿಗಳಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ಮಾಹಿತಿ ಸಂಗ್ರಹಿಸಿ, ವಿಶ್ಲೇಷಿಸಿ ವೈಜ್ಞಾನಿಕ ಯೋಜನೆ ತಯಾರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅನ್ವೇಷಣೆಯ ಸ್ವಭಾವ ಕಂಡುಕೊಳ್ಳುವದರೊಂದಿಗೆ ಸಂಶೋಧನಾ ಪ್ರವೃತ್ತಿ ಬೆಳೆಸಲು ಸಹಕಾರಿಯಾಗಿದೆ ಎಂದರು. ಈ ಸಮಾವೇಶದ ಮೂಲಕ ಮಕ್ಕಳು ವೈಜ್ಞಾನಿಕ ಅಧ್ಯಯನ ನಡೆಸಲು ಸಹಕಾರಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್. ರವಿಶಂಕರ್ ಮಾತನಾಡಿ, ವಿಜ್ಞಾನ ಸಮಾವೇಶ ಮಕ್ಕಳಲ್ಲಿ ಸೃಜನಶೀಲತೆ, ಕ್ರಿಯಾಶೀಲ ಹಾಗೂ ಉತ್ತಮ ಜೀವನಶೈಲಿ ಬೆಳೆಸುವ ಮೂಲಕ ಅವರನ್ನು ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸಲು ಉತ್ತಮ ವೇದಿಕೆ ಒದಗಿಸುತ್ತದೆ ಎಂದರು. ರೋಟರಿ ಸಂಸ್ಥೆಯು ಸ್ವಚ್ಛತೆ, ಪರಿಸರ ಹಾಗೂ ವಿಜ್ಞಾನ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ, ರೋಟರಿ ಮಿಸ್ಟಿ ಹಿಲ್ಸ್‍ನ ಕಾರ್ಯದರ್ಶಿ ಎಂ.ಯು. ಮಹೇಶ್, ಸಂಪನ್ಮೂಲ ವ್ಯಕ್ತಿ, ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಜಿ. ಶ್ರೀನಾಥ್, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ವನಿತಾ ಚಂಗಪ್ಪ, ಸಮಾವೇಶದ ಜಿಲ್ಲಾ ಸಂಯೋಜಕ ಸಿ.ಎಸ್. ಸುರೇಶ್, ಶೈಕ್ಷಣಿಕ ಸಂಯೋಜಕ ಜಿ. ಶ್ರೀಹರ್ಷ, ವಿಜ್ಞಾನ ಪರಿಷತ್ ಸದಸ್ಯ ಇ.ಸುಲೇಮಾನ್ ಇತರರು ಇದ್ದರು.

ನಂತರ “ಸ್ವಚ್ಛ, ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು” ಎಂಬ ಕೇಂದ್ರ ವಿಷಯದಡಿ ವಿವಿಧ ಉಪ ವಿಷಯದಡಿ ಶಿಕ್ಷಕರು ತಮ್ಮ ಶಾಲೆಯ ಮಕ್ಕಳಿಂದ ಹೇಗೆ ವೈಜ್ಞಾನಿಕ ಯೋಜನಾ ಪ್ರಬಂಧ ತಯಾರಿಸಬೇಕು ಎಂಬ ಬಗ್ಗೆ ಸಂಪನ್ಮೂಲ ವ್ಯಕ್ತಿ ಜಿ. ಶ್ರೀನಾಥ್ ಮಾಹಿತಿ ನೀಡಿದರು. ಸಮಾವೇಶದಲ್ಲಿ ಶಕ್ತಿ, ಆರೋಗ್ಯ, ಸ್ವಚ್ಛತೆ ಮತ್ತು ಪೋಷಣೆ, ಪರಿಸರ ವ್ಯವಸ್ಥೆಗಳು, ಜೀವಿ ಪರಿಸರ ಮತ್ತು ಪರಿಸರ ಸೇವೆಗಳು, ಆರೋಗ್ಯ, ನೈರ್ಮಲ್ಯ ಮತ್ತು ಸ್ವಾಸ್ಥ್ಯ ಪರಿಪಾಲನೆ, ತ್ಯಾಜ್ಯದಿಂದ ಸಂಪತ್ತು, ಸಮಾಜ, ಸಂಸ್ಕೃತಿ ಮತ್ತು ಜೀವನೋಪಾಯ ಹಾಗೂ ಸಾಂಪ್ರಾದಾಯಿಕ ಜ್ಞಾನ ವ್ಯವಸ್ಥೆ ಇತ್ಯಾದಿ ಕಾರ್ಯ ಮತ್ತು ಚಟುವಟಿಕೆಗಳು ಮುಂತಾದ ವಿಷಯಗಳ ಕುರಿತು ತಮ್ಮ ಪ್ರಯೋಗಗಳ ಮೂಲಕ ತಮ್ಮ ಶಾಲೆಯ ಸುತ್ತಮುತ್ತ ಸಮೀಕ್ಷೆ ಮೂಲಕ ವೈಜ್ಞಾನಿಕ ಪ್ರಬಂಧ ತಯಾರಿಸುವ ಕುರಿತು ಟಿ.ಜಿ. ಪ್ರೇಮಕುಮಾರ್ ತಿಳಿಸಿದರು.