ಚೆಟ್ಟಳ್ಳಿ, ಅ. 17: ನಾಪೋಕ್ಲು ಸಮೀಪದ ಕಕ್ಕಬೆ ಪ್ರೌಢಶಾಲಾ ಮೈದಾನದಲ್ಲಿ ‘ಜೀ ಟೆನ್ ವಯಕ್ಕೋಲ್ ಫ್ರೆಂಡ್ಸ್’ ಇವರ ವತಿಯಿಂದ ನಡೆದ 5ನೇ ವರ್ಷದ 7+2 ಜನರ ಮುಕ್ತ ಕಾಲ್ಚೆಂಡು ಪಂದ್ಯಾವಳಿಯಲ್ಲಿ 35 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಪ್ರಥಮ ಸ್ಥಾನವನ್ನು ರೋಜಾರಿಯರ್ಸ್ ಗೋಣಿಕೊಪ್ಪ ಪಡೆದುಕೊಂಡಿದೆ. ದ್ವಿತೀಯ ಸ್ಥಾನಕ್ಕೆ ಯಂಗ್ ಇಂಡಿಯಾ ಪಾಲಿಬೆಟ್ಟ ತಂಡವು ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಅಮ್ಮತ್ತಿ ತಂಡವನ್ನು ಪಾಲಿಬೆಟ್ಟ ತಂಡವು 1-0 ಗೋಲುಗಳ ಅಂತರದ ಗೋಲುಗಳಿಂದ ಸೋಲಿಸಿ ಫೈನಲ್ಗೆ ಲಗ್ಗೆಯಿಟ್ಟಿತ್ತು. ಎರಡನೇ ಸೆಮಿಫೈನಲ್ ಪಂದ್ಯವು ಜೀ ಟೆನ್ ಹಾಗೂ ಗೋಣಿಕೊಪ್ಪ ತಂಡಗಳ ನಡುವೆ ನಡೆಯಿತು. ಗೋಣಿಕೊಪ್ಪ ತಂಡವು 1-0 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು. ಫೈನಲ್ ಪಂದ್ಯಾಟವು ಪೆನಾಲ್ಟಿ ಶೂಟ್ ಔಟ್ನಲ್ಲಿ 4-3 ಗೋಲುಗಳ ಅಂತರದಿಂದ ಗೋಣಿಕೊಪ್ಪ ತಂಡ ಗೆಲವು ಸಾಧಿಸಿತು.
ಪಂದ್ಯಾಟದ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಪಾಲಿಬೆಟ್ಟ ತಂಡದ ಅಜಯ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೋಣಿಕೊಪ್ಪ ತಂಡದ ಅನ್ಸಾರ್ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ, ರಹಮಾನ್, ಯೂಸುಫ್, ಕುಲ್ಲೇಟಿರ ಮುತ್ತಪ್ಪ ಮತ್ತಿತರರು ಇದ್ದರು.