ವೀರಾಜಪೇಟೆ, ಅ. 17: ಹೆಣ್ಣು ಮಕ್ಕಳು ದೇಶದ ಪ್ರಜೆಗಳು, ಸಮಸ್ಯೆಗಳು ಬಂದಾಗ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೆದರೆ ಕೂಡಲೇ ಶಿಕ್ಷಕರಿಗೆ ಅಥವಾ ತಮ್ಮ ಪೋಷಕರಿಗೆ ತಿಳಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ ಅಂಚಿ ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ, ಸಂತ ಅನ್ನಮ್ಮ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಸಂತ ಅನ್ನಮ್ಮ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಮತ್ತು ಭ್ರೂಣ ಹತ್ಯೆ ತಡೆ ಕಾಯ್ದೆಯ ಕುರಿತು’ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು, ಭ್ರೂಣ ಹತ್ಯೆ ಮಾಡಿದವರಿಗೆ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಸುಳ್ಳು ಸಾಕ್ಷಿ ಹೇಳಿದವರಿಗೂ ಶಿಕ್ಷೆ ವಿಧಿಸಲಾಗುವದು. ಹೆಣ್ಣು ಮಕ್ಕಳ ಮೇಲೆ ಯಾರಾದರು ದೌರ್ಜನ್ಯ ಎಸಗಿದರೆ, ಕಿರುಕುಳ ನೀಡಿದರೆ ನ್ಯಾಯಾಲಯಕ್ಕೆ ನೇರವಾಗಿ ದೂರು ನೀಡಬಹುದು, ಸಾಧ್ಯವಾದಲ್ಲಿ ಸಾಕ್ಷ್ಯಾಧಾರದ ಮೇಲೆ ಲಿಖಿತವಾಗಿ ದೂರು ನೀಡಿದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದರು.
ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಹಿರಿಯ ಶಿಕ್ಷಕ ಚಂದ್ರಹಾಸ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕಾನೂನು ತಿಳಿದು ಕೊಂಡು ಅದನ್ನು ಬಳಕೆ ಮಾಡುವಂತಾಗಬೇಕು. ಸಿಗುವಂತಹ ಉತ್ತಮ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಮಾತನಾಡಿ, ಭಾರತ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದು, “ಹೆಣ್ಣೊಂದು ಕಲಿತರೆ ಕುಟುಂಬವೇ ಕಲಿತಂತೆ” ಎಂಬಂತೆ ಹೆಣ್ಣು ಮಕ್ಕಳು ಶಿಸ್ತಿನಿಂದ ವಿದ್ಯೆ ಕಲಿತು ಜೀವನದ ಗುರಿ ಮುಟ್ಟುವಂತಾಗಬೇಕು ಎಂದು ಹೇಳಿದರು. ಸಭೆಯಲ್ಲಿ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಿಕ್ಷಕ ಜಫ್ರಿ ಡಿಸಿಲ್ವಾ ಸ್ವಾಗತಿಸಿ, ವಂದಿಸಿದರು.