ಒಡೆಯನಪುರ: ಆಲೂರು-ಸಿದ್ದಾಪುರ, ಅ. 17: ರಾಷ್ಟ್ರ ಮತ್ತು ಸಮಾಜದ ಮುನ್ನೆಡೆಗೆ ಯುವ ಜನಾಂಗ ಸ್ವಾರ್ಥ ರಹಿತವಾಗಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಚಿಕ್ಕ ಅಳುವಾರ ಮಂಗಳೂರು ವಿ.ವಿ. ನಿಲಯದ ಸ್ನಾತಕೋತ್ತರ ಕೇಂದ್ರದ ಉಪನ್ಯಾಸಕ ಜಮೀರ್ ಆಹಮದ್ ಅಭಿಪ್ರಾಯ ಪಟ್ಟರು. ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಸಂಸ್ಥೆ ಮತ್ತು ಶನಿವಾರಸಂತೆ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ‘ಸಮೂಹ ಮಾಧ್ಯಮ ಹಾಗೂ ಯುವ ಸಮೂಹ’ ವಿಚಾರದ ಕುರಿತು ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮೂಹ ಮಾಧ್ಯಮಗಳಿಂದು ಸರಕಾರ, ಜನಪ್ರತಿನಿಧಿಗ¼ನ್ನು ಹಾಗೂ ಜನರನ್ನು ಜಾಗೃತಿಗೊಳಿಸುವ ಮತ್ತು ವಿದ್ಯಾಮಾನ ಮಾಹಿತಿಯನ್ನು ಬಿತ್ತರಿಸುವಂತಹ ಜವಾಬ್ದಾರಿಯುತ ಕಾರ್ಯನಿರ್ವಹಿಸುತ್ತಿದೆ ಎಂದರು. ಮಾಧ್ಯಮಗಳಿಗೆ ಸಮಾಜವನ್ನು ತಿದ್ದುವ ಮತ್ತು ಜನರಿಗೆ ಮಾಹಿತಿ ನೀಡುವ ಹೊಣೆಗಾರಿಕೆ ಹೊರತು ತೀರ್ಪು ನೀಡುವ ಹೊಣೆಗಾರಿಕೆ ಇಲ್ಲ ಈ ನಿಟ್ಟಿನಲ್ಲಿ ಜನರು ಮಾಧ್ಯಮ ಕ್ಷೇತ್ರದ ಬಗ್ಗೆ ಅರಿತುಕೊಳ್ಳಬೇಕಾಗಿದೆ ಎಂದರು.

ಕಾಲೇಜು ಪ್ರಾಂಶುಪಾಲ ಎಂ.ಆರ್. ನಿರಂಜನ್ ಮಾತನಾಡಿ, ಮಾಧ್ಯಮಗಳಿಂದ ಜನರು ಜಾಗೃತಿಗೊಳುತಿದ್ದಾರೆ, ಪ್ರತಿಯೊಬ್ಬರ ಬೆಳವಣಿಗೆ, ಸಮಾಜದ ಏಳಿಗೆಗೂ ಮಾಧ್ಯಮಗಳು ಸಹಕಾರಿಯಾಗುತ್ತಿವೆ. ವಿದ್ಯಾರ್ಥಿಗಳು ಮಾಧ್ಯಮ ಕ್ಷೇತ್ರದ ಬಗ್ಗೆ ಅರಿತುಕೊಳ್ಳುವ ಅಗತ್ಯವಿದೆ ಎಂದರು.

ವಿದ್ಯಾಸಂಸ್ಥೆ ಉಪಾಧ್ಯಕ್ಷ ನಾಗರಾಜು ಮಾತನಾಡಿ, ವಿದ್ಯಾರ್ಥಿ ಗಳು ಸೇರಿದಂತೆ ಪ್ರತಿಯೊಬ್ಬರೂ ದಿನ ಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು, ದಿನಪತ್ರಿಕೆಗಳಿಂದ ಅನೇಕ ವಿಚಾರ, ಮಾಹಿತಿಗಳನ್ನು ನಿಖರವಾಗಿ ತಿಳಿದುಕೊಳ್ಳ ಬಹುದಾಗಿದೆ ಎಂದರು.

ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಸ್. ಪರಮೇಶ್, ನಿರ್ದೇಶಕ ಸಿ.ಸಿ. ಶಂಭುಲಿಂಗಪ್ಪ, ಪತ್ರಕರ್ತರಾದ ದಿನೇಶ್ ಮಾಲಂಬಿ, ಸುರೇಶ್ ಒಡೆಯನಪುರ, ಉಪನ್ಯಾಸಕ ಯೋಗೇಂದ್ರ, ಅಭಿಷೇಕ್ ಮುಂತಾದವರು ಹಾಜರಿದ್ದರು.