ಮಡಿಕೇರಿ, ಅ. 17 : ಪ್ರಾಕೃತಿಕ ವಿಕೋಪದಿಂದ ನಲುಗಿರುವ ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ ಸ್ಥಾಪಿಸಲಾಗುವದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಅವರು ಬುಧವಾರ ನಗರದ ಗಾಂಧಿಮೈದಾನದಲ್ಲಿ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೊಳ ಗಾಗಿರುವ ಕೊಡಗು ಜಿಲ್ಲೆಯ ಸಂತ್ರಸ್ತರೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಕೊಡಗಿನ ಪುನರ್ ನಿರ್ಮಾಣಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸಲು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿ, ಪ್ರಾಧಿಕಾರ ರಚಿಸಲಾಗುವದು; ಸಚಿವರು, ಜನಪ್ರತಿನಿಧಿಗಳನ್ನು ಸೇರ್ಪಡಿಸಿ ಸಧ್ಯದಲ್ಲೆ ಈ ಬಗ್ಗೆ ಕ್ರಮ ಕೈಗೊಳ್ಳ ಲಾಗುವದು; ಇದರಿಂದ ಪುನರ್ ನಿರ್ಮಾಣ ಕಾರ್ಯಕ್ರಮಗಳಿಗೆ ಇನ್ನಷ್ಟು ವೇಗ ಸಿಕ್ಕಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.ಇದುವರೆಗೆ ಕೊಡಗು ಜಿಲ್ಲೆಗೆ 122 ಕೋಟಿ ರೂಪಾಯಿಯನ್ನು ಸರಕಾರದ ನಿಧಿಯಿಂದ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಕೊಡಗು ಪರಿಹಾರ ನಿಧಿಗೆ ಬಂದ ಹಣವನ್ನು ಸಂಪೂರ್ಣ ವಾಗಿ ಸಂತ್ರಸ್ತರ ಬದುಕು ಬದಲಾ ಯಿಸಲು ಹಾಗೂ ಅವರ ಪುನರ್ವಸತಿಗೆ ಬಳಕೆ ಮಾಡ ಲಾಗುವದು. ಯಾವದೇ ಕಾರಣಕ್ಕೂ ಇದರ ದುರ್ಬಳಕೆ ಅವಕಾಶ ನೀಡುವದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.
ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡಗು ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ನೀಡಲಾಗಿರುವ ಅನುದಾನವನ್ನು ಸಂಪೂರ್ಣ ಇದೇ ಉದ್ದೇಶಕ್ಕೆ ಬಳಸಲಾಗುವದು. ರಸ್ತೆ, ಕಟ್ಟಡ, ದುರಸ್ತಿ ಕಾಮಗಾರಿಗಳಿಗೆ ಸರ್ಕಾರದಿಂದ ಪ್ರತ್ಯೇಕ ಅನುದಾನ ಒದಗಿಸಲಾಗುವದು ಎಂದು ಅವರು ಹೇಳಿದರು.
ಈಗಾಗಲೇ ಲೋಕೋಪಯೋಗಿ ಹಾಗೂ ಗ್ರಾಮೀಣ ರಸ್ತೆಗಳ ದುರಸ್ತಿಗಾಗಿ 85 ಕೋಟಿ ರೂ. ಒದಗಿಸಲಾಗಿದೆ. ಶೀಘ್ರವೇ ಅಗತ್ಯ ಪ್ರಮಾಣದ ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗುವದು ಎಂದು ಅವರು ಹೇಳಿದರು.
ಈಗ 6.5 ಕೋಟಿ ಖರ್ಚಾಗಿದ್ದು, ಗ್ರಾಮೀಣ ರಸ್ತೆಗಳಿಗೆ ಇನ್ನೂ 70 ಕೋಟಿ ಅಗತ್ಯವಿದೆ ಎಂದರು.
ಒಟ್ಟಾರೆ ಬೆಳೆಗಾರರು ಪ್ರವಾಸೋದ್ಯಮ ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ಕಾಯ್ದುಕೊಂಡು ಕೊಡಗು ಜಿಲ್ಲೆ ಸಮಗ್ರವಾಗಿ ಪುನರ್ ನಿರ್ಮಾಣವಾಗಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಅಗತ್ಯ ನೆರವು ಒದಗಿಸಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ಆದರೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲಗಾರರ ಬಗ್ಗೆ ಇನ್ನೂ ಮಾಹಿತಿಯನ್ನು ಒದಗಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ
(ಮೊದಲ ಪುಟದಿಂದ) ಎಂದು ಅವರು ಹೇಳಿದರು. ರಾಜ್ಯದಲ್ಲಿ ಪಾರದರ್ಶಕ ಆಡಳಿತಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸಾಮಥ್ರ್ಯ ಮತ್ತು ಗುಣಮಟ್ಟದ ಆಧಾರದ ಮೇಲೆ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ. ಬೆಂಗಳೂರು ನಗರವನ್ನು ಆಡಳಿತಾತ್ಮಕವಾಗಿ ಸ್ವಚ್ಛಗೊಳಿಸಲು ಮೊದಲ ಆದ್ಯತೆ ನೀಡಲಾಗಿದೆ. ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಗಾಂಧೀಜಿಯವರ ಆದರ್ಶಗಳನ್ನು ಹೆಚ್ಚಾಗಿ ಅಳವಡಿಸುವ ನಿಟ್ಟಿನಲ್ಲಿ ತಾವು ಕಾರ್ಯ ಪ್ರವೃತ್ತರಾಗಿರುವದಾಗಿ ಮುಖ್ಯಮಂತ್ರಿ ಅವರು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾದರೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನೆಮ್ಮದಿ ಇರುತ್ತದೆ. ಯಾವದೇ ರೀತಿಯ ಅನಾಹುತಗಳು ಆಗದಂತೆ ಜಿಲ್ಲೆಯಲ್ಲಿ ಉತ್ತಮ ಮಳೆ ಆಗಬೇಕು. ಅದಕ್ಕೆ ಪೂರಕ ರೀತಿಯ ವ್ಯವಸ್ಥೆಗಳನ್ನು ಮಾಡಬೇಕಾಗಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದರು.
ಮನೆ ಕಳೆದುಕೊಂಡ ಸುಮಾರು 800 ಕುಟುಂಬಗಳಿಗೆ ತಾತ್ಕಾಲಿಕವಾಗಿ ಮಾಸಿಕ ರೂ. 10000 ದವರೆಗೆ ಮನೆ ಬಾಡಿಗೆ ನೀಡಲಾಗುವದು. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ನಿಯಮವನ್ನು ಬದಿಗಿಟ್ಟು ದೇಶದಲ್ಲಿಯೇ ಪ್ರಥಮ ಬಾರಿಗೆ ಮನೆ ಕಳೆದುಕೊಂಡವರಿಗೆ ಅತ್ಯಧಿಕ ಪರಿಹಾರ ನೀಡಲಾಗುತ್ತಿದೆ. ನೂತನ ಮನೆ ನಿರ್ಮಾಣವಾಗುವವರೆಗೆ 10 ತಿಂಗಳ ಕಾಲ ಒಟ್ಟು ಒಂದು ಲಕ್ಷವನ್ನು ನೀಡಲಾಗುವದು. ಇದೀಗ ಮನೆಯ ಉಪಕರಣಗಳಿಗಾಗಿ ರೂ. 50 ಸಾವಿರ ವಿತರಿಸುವ ಕಾರ್ಯ ಆರಂಭಗೊಂಡಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಿಂದ ಸಂತ್ರಸ್ತರ ಖಾತೆಗೆ ಈ ಮೊತ್ತ ಬರಲಿದೆ. ಅಲ್ಲದೆ ರೂ. 1.03 ಲಕ್ಷವನ್ನು ನೀಡಲಾಗಿದ್ದು, ಮನೆಗೆ ರೂ. 6 ಲಕ್ಷ ಹೀಗೆ ಒಟ್ಟು ಪ್ರತೀ ಮನೆ ಪುನರ್ ನಿರ್ಮಾಣಕ್ಕೆ ಸಂತ್ರಸ್ತರಿಗೆ ರೂ. 8.53 ಲಕ್ಷ ಮೊತ್ತವನ್ನು ನೀಡಲಾಗುವದು. ಮನೆಗಳ ಪುನರ್ ನಿರ್ಮಾಣ ಕಾರ್ಯವನ್ನು ಯುದ್ದೋಪಾಧಿಯಲ್ಲಿ ನಡೆಸಲಾಗುವದು ಎಂದು ಮುಖ್ಯಮಂತ್ರಿಗಳು ಹೇಳಿದರು. ಮುಂದಿನ ವರ್ಷಗಳಲ್ಲಿ ದುರಂತ ಆಗದಂತೆ ಕ್ರಮ ಕೈಗೊಳ್ಳು ಜವಾಬ್ದಾರಿ ಸರಕಾರದ್ದಾಗಿದೆ ಎಂದು ವಿವರಿಸಿದರು.
ಗದ್ದೆ, ಕೃಷಿ ಜಮೀನು ಮತ್ತು ತೋಟಗಳಲ್ಲಿ ಕೃಷಿ ಕಾರ್ಯಗಳ ಪುನರ್ ಚಾಲನೆಗೆ ಕೊಡಗು ಜಿಲ್ಲೆಗೆ ಹೆಚ್ಚುವರಿಯಾಗಿ ವಿವಿಧ ಜಿಲ್ಲೆಗಳ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗುವದು ಎಂದು ಅವರು ತಿಳಿಸಿದರು. ಕಾಫಿ ಮಂಡಳಿಯವರು ಯಾವದೇ ಪರಿಹಾರ ಘೋಷಿಸುವದಾಗಲಿ, ಕೇಂದ್ರ ಸರಕಾರದ ನೆರವು ಕೇಳುವದಾಗಲಿ ಮಾಡದೆ ರಾಜ್ಯ ಸರಕಾರಕ್ಕೆ ಪುಕ್ಕಟೆ ಸಲಹೆ ನೀಡಿದ್ದಾರೆಂದು ಕಟುವಾಗಿ ಟೀಕಿಸಿದರು.
ಸಂತ್ರಸ್ತರ ಮಕ್ಕಳ ಒಂದು ವರ್ಷದ ಸಂಪೂರ್ಣ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ರಾಜ್ಯ ಸರಕಾರ ನೋಡಿಕೊಳ್ಳಲಿದೆ. ಇದಲ್ಲದೇ, ಹಾನಿಗೊಂಡಿರುವ ಶಾಲಾ ಕಾಲೇಜುಗಳನ್ನು ಪುನರ್ ನಿರ್ಮಿಸಲಾಗುವದು ಎಂದು ಮುಖ್ಯಮಂತ್ರಿಗಳು ಪ್ರಕಟಿಸಿದರು. ಸಂತ್ರಸ್ತ ವಿದ್ಯಾರ್ಥಿಗಳು ಶಿಕ್ಷಣ ಸಾಲ ಮಾಡಿದ್ದರೆ ವಿವರ ನೀಡಿ ಎಂದ ಹೆಚ್ಡಿಕೆ ಅದರ ಮನ್ನಾ ಬಗ್ಗೆ ನಿರ್ಧರಿಸುತ್ತೇನೆ ಎಂದರು. ಕೊಡಗಿಗೆ ಮತ್ತೊಮ್ಮೆ ಭೇಟಿ ನೀಡಿ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳನ್ನು ಪರಿಶೀಲಿಸಲಾಗುವದು ಎಂದು ಅವರು ಹೇಳಿದರು.
ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ಸಂತ್ರಸ್ತರಲ್ಲಿ ಆತ್ಮವಿಶ್ವಾಸ ತುಂಬಲು ಸಂವಾದ ನಡೆಸಲಾಗುತ್ತಿದೆ. ಸಂತ್ರಸ್ತರು ಸರಕಾರದಿಂದ ಏನು ಬಯಸಿದ್ದಾರೆ ಎಂಬದು ತಿಳಿಯುವದು ಇದರ ಉದ್ದೇಶ. ಯಾವದೇ ರಾಜಕೀಯ ಉದ್ದೇಶ ಇದರಲ್ಲಿ ಇಲ್ಲ. ಅಧಿಕಾರ ತನಗೆ ಮುಖ್ಯ ಅಲ್ಲ. ಕೊಡಗು ಸಂಕಷ್ಟದಲ್ಲಿದ್ದಾಗ ಇಲ್ಲಿನ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿದ್ದಾರೆ. ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಒದಗಿಸುವ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸಂತ್ರಸ್ತರಿಗೆ ತಲಾ ರೂ. 50 ಸಾವಿರ ಮೊತ್ತ ಪರಿಹಾರದ ತಿಳಿವಳಿಕೆ ಪತ್ರವನ್ನು ಸಾಂಕೇತಿಕವಾಗಿ ವಿತರಿಸಿದರು.
ಅಧ್ಯಕ್ಷತೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಹಿಸಿದ್ದರು. ಅವರು ಜಿಲ್ಲೆಯ ಶಾಸಕರ ಪರವಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿಯನ್ನು ಓದಿದರು. ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಸಣ್ಣ ನೀರಾವರಿ ಸಚಿವ ಪುಟ್ಟರಾಜು, ಶಾಸಕರಾದ ಕೆ.ಜಿ. ಬೋಪಯ್ಯ, ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣ್ಯ, ಎಸ್.ಎಲ್. ಭೋಜೇಗೌಡ, ಶ್ರೀಕಂಠೇಗೌಡ, ಜಿ.ಪಂ. ಅಧ್ಯಕ್ಷ ಹರೀಶ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಶ್ರೀವಿದ್ಯಾ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ಜಗದೀಶ್ ನಿರೂಪಿಸಿ, ವಂದಿಸಿದರು.
ಮನೆ ನಿರ್ಮಾಣ ಜಾಗ ವೀಕ್ಷಣೆ: ಮುಖ್ಯಮಂತ್ರಿಯವರು ನಗರದ ಹೊರವಲಯದ ಆರ್ಟಿಒ ಕಚೇರಿ ಬಳಿ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಗುರುತಿಸಲಾಗಿರುವ ಸ್ಥಳಕ್ಕೆ ಭೇಟಿ ನೀಡಿ ಮಾದರಿ ಮನೆ ನಿರ್ಮಿಸಲು ಉದ್ದೇಶಿಸಿರುವ ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡಿದರು.