*ಗೋಣಿಕೊಪ್ಪಲು, ಅ. 16: ಕೊಡಗಿನಲ್ಲಿ ಸಾಹಿತ್ಯ ರಚನೆಗೆ ಪೂರಕವಾದ ವಾತಾವರಣವಿದ್ದರೂ ಉತ್ತಮ ಸಾಹಿತ್ಯ ಕೃತಿಗಳು ಹೊರಬರದಿರುವದು ವಿಷಾದನೀಯ ಎಂದು ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಜೆ. ಸೋಮಣ್ಣ ಹೇಳಿದರು.
ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಜ್ಯೋತಿ ಸಾಹಿತ್ಯ ಬಳಗ ಹಾಗೂ ಕನ್ನಡ ಜಾಣ-ಜಾಣೆಯರ ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಲಿಪಿಯನ್ನು ಬಳಸಿ ಕೊಡವ ಭಾಷೆಯಲ್ಲಿ ನಾಲ್ಕು ಕೃತಿಗಳನ್ನು ರಚಿಸಿದ ಹರದಾಸ ಅಪ್ಪಚ್ಚ ಕವಿ ಕೊಡಗಿನ ಆದಿ ಕವಿ ಎನ್ನಿಸಿ ಕೊಳ್ಳಲಿದ್ದಾರೆ. ಕನ್ನಡದಲ್ಲಿಯೇ ಕೃತಿ ರಚನೆ ಮಾಡಿದ ಪಂಜೆ ಮಂಗೇಶರಾಯ, ಭಾರತಿಸುತ, ಕೊಡಗಿನ ಗೌರಮ್ಮ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಇವರ ಕೃತಿಗಳನ್ನು ಅಧ್ಯಯನ ಮಾಡುವ ಮೂಲಕ ಯುವಕರು ಬರವಣಿಗೆಯಲ್ಲಿ ತೊಡಗಿ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡುವಂತಾಗಲಿ ಎಂದು ಆಶಿಸಿದರು.
ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ಬೇಂದ್ರೆ, ಶಿವರಾಮ ಕಾರಾಂತ, ಕುವೆಂಪು, ಡಿವಿಜಿ ಅವರಿಗೆ ಕೊಡಗು ಅಚ್ಚುಮೆಚ್ಚಿನ ತಾಣವಾಗಿತ್ತು. ಯುವ ಲೇಖಕರು ಸಾಮಾಜಿಕ ಪ್ರಜ್ಞೆ ಬೆಳೆಸಿಕೊಂಡು ತೆರೆದ ಮನಸ್ಸಿನಿಂದ ಸಮಾಜವನ್ನು ನೋಡುವ ಮೂಲಕ ಸಾಹಿತ್ಯ ರಚನೆಯಲ್ಲಿ ತೊಡಗಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ತಾತೀರ ಬೋಪಯ್ಯ ಮಾತನಾಡಿ, ಸಾಹಿತ್ಯ ರಚನೆಗೆ ಬದುಕಿನ ಅನುಭವ ಮುಖ್ಯವೇ ಹೊರತು ಆರ್ಥಿಕ ಶ್ರೀಮಂತಿಕೆಯಲ್ಲ, ಬಡತನದ ಬದುಕು ಬದುಕಿನ ಅನುವವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ನಡಿಕೇರಿಯಂಡ ಚಿಣ್ಣಪ್ಪ ನವರು ಪ್ರಾಚೀನ ಸಂಪ್ರದಾಯ ಮತ್ತು ಮೌಲ್ಯಗಳ ಬಗ್ಗೆ ತಮ್ಮ ಪಟ್ಟೋಲೆಪಳಮೆಯಲ್ಲಿ ಉತ್ತಮವಾಗಿ ಉಲ್ಲೇಖಿಸಿದ್ದಾರೆ. ವಿದ್ಯಾರ್ಥಿಗಳು ಇವುಗಳ ಬಗ್ಗೆ ಅಧ್ಯಯನ ಮಾಡಿದರೆ ನಮ್ಮ ಹಿರಿಯರ ಆದರ್ಶಗಳನ್ನು ಅರ್ಥೈಸಿಕೊಳ್ಳಬಹುದು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥೆ ಡಿ.ಕೆ. ಉಷಾ ಮಾತನಾಡಿ, ಕೊಡಗಿನ ಗೌರಮ್ಮ, ಭಾರತಿಸುತ, ಕಾಕೆಮಾನಿ, ವೈದೇಹಿ ಮೊದಲಾದವರು ಕನ್ನಡ ಸಾಹಿತ್ಯ ಲೋಕಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಭಾರತಿಸುತ ಅವರ ಕಾದಂಬರಿಗಳು ಸಾಮಾಜಿಕ ಮೌಲ್ಯಗಳನ್ನು ಪ್ರತಿಬಿಂಬಿಸು ವಂತಹ ದ್ದಾಗಿವೆ. ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲಿಯೇ ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಬರವಣಿಗೆ ಬಗ್ಗೆ ಗಮನಹರಿಸಿದರೆ ಒಳ್ಳೆಯದು ಎಂದರು.