ಸಿದ್ದಾಪುರ, ಅ. 16: ಮಾಲ್ದಾರೆ ವ್ಯಾಪ್ತಿಯಲ್ಲಿ ಹುಲಿ ಹೆಜ್ಜೆ ಗೋಚರವಾಗಿದ್ದು, ಗ್ರಾಮಸ್ಥರು ಹಾಗೂ ಕಾರ್ಮಿಕರು ಭಯಭೀತರಾಗಿದ್ದಾರೆ.

ಮಾಲ್ದಾರೆ ಗ್ರಾಮದ ಮಾರ್ಗೊಲ್ಲಿ ತೋಟದಲ್ಲಿ ಕಳೆದ ಕೆಲ ದಿನಗಳಿಂದ ಹುಲಿ ನಡೆದಾಡಿದ ಹೆಜ್ಜೆ ಗುರುತು ಪತ್ತೆಯಾಗಿದೆ. ಹುಲಿ ಇರುವ ಬಗ್ಗೆ ಗ್ರಾಮಸ್ಥರು ಹಾಗೂ ಕಾರ್ಮಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಸಿದ್ದಾಪುರ ಸಮೀಪದ ಮೈಲಾತ್‍ಪುರ, ಮಾಲ್ದಾರೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹುಲಿ ಪ್ರತ್ಯಕ್ಷವಾಗುತ್ತಿದ್ದು, ಹಲವು ಜಾನುವಾರುಗಳನ್ನು ಬಲಿ ಪಡೆದುಕೊಂಡಿತ್ತು. ಅರಣ್ಯ ಇಲಾಖೆಯು ಕೂಡ ಹುಲಿಯ ಸೆರೆಗೆ ಹಲವು ಬಾರಿ ಬೋನು ಅಳವಡಿಸಿದ್ದರೂ, ಈವರೆಗೂ ಹುಲಿಯು ಸೆರೆಯಾಗದೇ ಗ್ರಾಮಸ್ಥರಲ್ಲಿ ಆತಂಕ ಮುಂದುವರೆದಿದೆ.

ಒಂದೆಡೆ ಕಾಡಾನೆ ಮತ್ತೊಂದೆಡೆ ವ್ಯಾಘ್ರ

ಸಿದ್ದಾಪುರ ಸುತ್ತಮುತ್ತಲ ಪ್ರದೇಶದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಇದೀಗ ಹುಲಿ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಮತ್ತಷ್ಟು ಭಯದ ವಾತಾವರಣ ನಿರ್ಮಾಣವಾಗಿದೆ. ಕಾಡಾನೆ ಹಾವಳಿಗೆ ಬೇಸತ್ತಿರುವ ಕಾರ್ಮಿಕರು ಇದೀಗ ಹುಲಿಯ ದಾಳಿಯ ಭಯದಿಂದಲೇ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಹುಲಿಯನ್ನು ಸೆರೆ ಹಿಡಿಯಬೇಕೆಂದು ಕಾರ್ಮಿಕರು ಒತ್ತಾಯಿಸಿದ್ದಾರೆ.

ವಾಹನಗಳು ಬಾಡಿಗೆಗೆ ತೆರಳಲು ಹಿಂದೇಟು..!

ಸಿದ್ದಾಪುರ ಸಮೀಪದ ಮಾರ್ಗೊಲ್ಲಿ, ಮೈಲಾತ್‍ಪುರ ಕಾಫಿ ತೋಟಗಳಲ್ಲಿ ಕಾಡಾನೆಗಳು ಹಾಗೂ ಹುಲಿಯ ಹಾವಳಿಯಿಂದಾಗಿ ಸಿದ್ದಾಪುರ ಪಟ್ಟಣದಿಂದ ತೋಟದ ಲೈನ್ ಮನೆಗಳಿಗೆ ತೆರಳುವ ಮಂದಿ ವಾಹನಗಳನ್ನು ಬಾಡಿಗೆಗೆ ಕರೆದಲ್ಲಿ ಚಾಲಕರು ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆಂದು ಬೀಟಿಕಾಡು ತೋಟದ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಸಿದ್ದಾಪುರ ಪಟ್ಟಣದಲ್ಲಿ ಸಂಜೆ 6 ಗಂಟೆಯ ಬಳಿಕ ತೋಟದ ಸುತ್ತಮುತ್ತಲು ವಾಸಿಸುವ ಮಂದಿ ಮನೆ ಸೇರುತ್ತಿರುವದರಿಂದ ವರ್ತಕರಿಗೆ ಕೂಡ ವ್ಯಾಪಾರಕ್ಕೆ ಗ್ರಾಹಕರಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. - ವಾಸು