ಸೋಮವಾರಪೇಟೆ, ಅ. 16: ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುಲಿಯೊಂದು ಬೀಡುಬಿಟ್ಟಿದ್ದು, ಈಗಾಗಲೇ 2 ಜಾನುವಾರುಗಳನ್ನು ತಿಂದಿದೆ. ತಕ್ಷಣ ಪ್ರಾಣಿಹಂತಕ ಹುಲಿಯನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಹುಲಿ, ಈಗಾಗಲೇ ಎನ್.ಟಿ. ಈರಪ್ಪ ಮತ್ತು ಬಿ.ಟಿ. ಬೋಪಯ್ಯ ಅವರುಗಳಿಗೆ ಸೇರಿದ ಜಾನುವಾರನ್ನು ಕೊಂದು ಹಾಕಿದೆ. ಇದರಿಂದಾಗಿ ಗ್ರಾಮಸ್ಥರು ಭಯಾತಂಕದಿಂದ ದಿನದೂಡಬೇಕಿದ್ದು, ತಕ್ಷಣ ಅರಣ್ಯ ಇಲಾಖಾ ಸಿಬ್ಬಂದಿಗಳು ಹುಲಿ ಸೆರೆಗೆ ಕಾರ್ಯೋನ್ಮುಖರಾಗಬೇಕೆಂದು ಗ್ರಾ.ಪಂ. ಅಧ್ಯಕ್ಷೆ ಹೆಚ್.ಆರ್. ಪವಿತ್ರ ಒತ್ತಾಯಿಸಿದ್ದಾರೆ.

ಹೆಮ್ಮನಗದ್ದೆ, ನಗರಳ್ಳಿ, ಜಕ್ಕನಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸುವದಕ್ಕೂ ಮೊದಲು ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ಕಾರ್ಯಾಚರಣೆ ನಡೆಸಬೇಕೆಂದು ಗ್ರಾ.ಪಂ. ಮೂಲಕ ಅರಣ್ಯ ಇಲಾಖೆಯ ಗಮನ ಸೆಳೆದಿದ್ದಾರೆ.