ಮಡಿಕೇರಿ, ಅ. 16: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಕೊಡಗು ಇವರ ವತಿಯಿಂದ 2018-19ನೇ ಸಾಲಿಗೆ ಮತೀಯ ಅಲ್ಪ ಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್, ಪಾರ್ಸಿ ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರಿಗೆ ವೃತ್ತಿ ಪ್ರೋತ್ಸಾಹ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವೃತ್ತಿ ಪ್ರೋತ್ಸಾಹ ಯೋಜನೆ: ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದ ಜನರು ಕೈಗೊಳ್ಳುವ ಹಣ್ಣು ಮತ್ತು ತರಕಾರಿ ಮಾರಾಟ ಅಂಗಡಿ, ಮಾಂಸದ ಅಂಗಡಿ, ಮೀನು ಮಾರಾಟ ಹೈನುಗಾರಿಕೆ, ಎಳನೀರು, ಕಬ್ಬಿನ ಹಾಲು ಮಾರಾಟ ಅಂಗಡಿ, ತಂಪು ಪಾನೀಯ ಮಾರಾಟ ಅಂಗಡಿ, ಬೇಕರಿ, ಲಾಂಡ್ರಿ, ಡ್ರೈಕ್ಲಿನಿಂಗ್, ಎ.ಸಿ.ರಿಪೇರಿ, ರೆಫ್ರಿಜರೇಟರ್, ಮೋಟಾರ್ ರಿವೈಂಡಿಂಗ್ ವಕ್ರ್ಸ್, ವಾಟರ್ ವಾಷ್ ಸರ್ವೀಸ್, ಪಂಚರ್ ಶಾಪ್, ಗ್ಯಾಸ್ ವೆಲ್ಡಿಂಗ್, ಮೆಕ್ಯಾನಿಕ್, ಕಾರ್‍ಪೆಂಟರ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ರಿಪೇರಿ ಇತ್ಯಾದಿ ವೃತ್ತಿಗಳಿಗೆ ಅಗತ್ಯವಿರುವ ಬಂಡವಾಳಕ್ಕಾಗಿ ರಾಷ್ಟ್ರೀಕೃತ ಬ್ಯಾಂಕ್, ಷೆಡ್ಯುಲ್ ಬ್ಯಾಂಕ್, ಗ್ರಾಮೀಣ ಬ್ಯಾಂಕ್‍ನಿಂದ ಪಡೆಯುವ ರೂ.2.00 ಲಕ್ಷಗಳ ಸಾಲಕ್ಕೆ ಬ್ಯಾಂಕ್‍ನ ಪಾಲು 1 ಲಕ್ಷ ಸಾಲ, ನಿಗಮದ ಪಾಲು ಸಹಾಯಧನ ರೂ. 1 ಲಕ್ಷಗಳು. ಸಾಲ ಹಾಗೂ ಸಹಾಯಧನವನ್ನು ನಿಗಮದಿಂದ ನೀಡಲಾಗುತ್ತಿದೆ. ಜಿಲ್ಲೆಗೆ ಭೌತಿಕ ಗುರಿ 31, ಆರ್ಥಿಕ ಗುರಿ ರೂ. 31 ಲಕ್ಷಗಳಾಗಿದೆ.

ಅರ್ಜಿದಾರರು ಮತೀಯ ಅಲ್ಪಸಂಖ್ಯಾತರಾಗಿದ್ದು, ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಮತೀಯ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಆದ್ಯತೆ ನೀಡುವದು. ಫಲಾನುಭವಿಗಳ ವಯಸ್ಸು ಅರ್ಜಿ ಸಲ್ಲಿಸಲು 18 ರಿಂದ ಮೇಲ್ಪಟ್ಟು 45 ವಯೋಮಿತಿ ಯಿರಬೇಕು. ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರ ವಾರ್ಷಿಕ ಆದಾಯ ಗ್ರಾಮಾಂತರ ಪ್ರದೇಶದವರಿಗೆ ರೂ. 81 ಸಾವಿರ ಮತ್ತು ನಗರ ಪ್ರದೇಶದವರಿಗೆ ರೂ.1.03 ಲಕ್ಷ ಗಳ ಒಳಗಿರಬೇಕು.

ಅರ್ಜಿದಾರರ ಕುಟುಂಬದ ಸದಸ್ಯರು ಕೇಂದ್ರ, ರಾಜ್ಯ ಸರ್ಕಾರದ ನೌಕರಿಯಲ್ಲಿರಬಾರದು. ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವದೇ ಸಾಲ ಪಡೆದಿರಬಾರದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ರಾಮ ಮಂದಿರದ ಹಿಂಭಾಗ, ಹೊಟೇಲ್ ಹಿಲ್-ವ್ಯೂ ಹತ್ತಿರ, ಹಿಲ್ ರಸ್ತೆ, ಮಡಿಕೇರಿ -571201 ಇವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸ ಬಹುದಾಗಿದೆ. ಅರ್ಜಿ ಪಡೆದು ಸಲ್ಲಿಸಲು ತಾ. 31 ಕೊನೆ ದಿನವಾಗಿದೆ. ಕಚೇರಿ ದೂರವಾಣಿ ಸಂಖ್ಯೆ: 08272-220449 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಬಿ.ಎನ್. ನಾಗೇಂದ್ರ ಅವರು ತಿಳಿಸಿದ್ದಾರೆ.