ಮಡಿಕೇರಿ, ಅ. 16: ಅಕ್ಟೋಬರ್ ತಿಂಗಳಿನ ಮೂರನೇ ವಾರ ಬಿರುಸಿನ ಚಟುವಟಿಕೆಗಳಿಗೆ ಕೊಡಗು ಮೈ ತೆರೆದುಕೊಂಡಿದೆ. ಪ್ರಸಕ್ತ ವರ್ಷ ಕಾವೇರಿ ತೀರ್ಥೋದ್ಭವ, ಆಯುಧಪೂಜೆ, ವಿಜಯದಶಮಿ ಹಬ್ಬಗಳು ಒಟ್ಟೊಟ್ಟಿಗೆ ಎದುರಾಗಿವೆ. ತಾ. 17 ರಂದು (ಇಂದು) ಸಂಜೆ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವವಾಗಲಿದ್ದು, ರಾಜ್ಯದ ಮುಖ್ಯಮಂತ್ರಿಗಳು ಖುದ್ದಾಗಿ ಆಗಮಿಸುತ್ತಿದ್ದಾರೆ.
ಇದರೊಂದಿಗೆ ಈ ತನಕ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಿರುವ ಸಂತ್ರಸ್ತರೊಂದಿಗೆ, ಜಿಲ್ಲಾಡಳಿತದ ಅಧಿಕಾರಿಗಳೊಂದಿಗೂ ನಾಡಿನ ದೊರೆ ತಾ. 17 ರಂದು ಸಮಾಲೋಚಿಸಲಿದ್ದಾರೆ. ಇದಾದ ಬಳಿಕ ಸಂಜೆ 6.43ಕ್ಕೆ ತಲಕಾವೇರಿಯ ಪವಿತ್ರ ಕ್ಷಣ ಎದುರಾಗುತ್ತಿದೆ. ಮರುದಿನವೇ ಆಯುಧಪೂಜಾ ಕಾರ್ಯಕ್ರಮಗಳು ಹಾಗೂ ನಂತರದ ದಿನವಾದ ತಾ. 19ರ ಶುಕ್ರವಾರದಂದು ವಿಜಯದಶಮಿಯ ಸಮಾರಂಭಗಳು ನಡೆಯಲಿವೆ. ಕೊಡಗಿನಲ್ಲಿ ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ, ತುಲಾ ಸಂಕ್ರಮಣ, ಆಯುಧಪೂಜೆ, ವಿಜಯದಶಮಿ ಸಂದರ್ಭ ಕ್ಷಿಪ್ರ ಕೆಲಸ ಕಾರ್ಯಕ್ರಮಗಳಿರುತ್ತವೆ. ಈ ಬಾರಿ ನಿರಂತರವಾಗಿ ಮೂರು ದಿನಗಳು ಈ ಕಾರ್ಯಕ್ರಮ ನಿಗದಿಯಾಗಿದ್ದು, ಒಡನೆ ಶನಿವಾರ ಹಾಗೂ ಭಾನುವಾರವೂ ಎದುರಾಗುತ್ತಿರುವದರಿಂದ ಜಿಲ್ಲೆಯಲ್ಲಿ ಈಗಾಗಲೇ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ.
ಅದರಲ್ಲೂ ಮಡಿಕೇರಿ ಹಾಗೂ ಗೋಣಿಕೊಪ್ಪಲುವಿನಲ್ಲಿ ದಸರಾ ಹಬ್ಬದ ಕಾರ್ಯಚಟುವಟಿಕೆಗಳು ಸರಳತೆಯ ನಡುವೆಯೂ ಸಾಗುತ್ತಿದೆ. ಇದು ಮಾತ್ರವಲ್ಲದೆ, ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳಾದ ವೀರಾಜಪೇಟೆ, ಕುಶಾಲನಗರ ಹಾಗೂ ಸೋಮವಾರಪೇಟೆ ಪಂಚಾಯಿತಿಗಳ ಚುನಾವಣೆಯೂ ಆರಂಭಗೊಂಡಿದ್ದು, ನಾಮಪತ್ರ ಸಲ್ಲಿಕೆಗೆ ತಾ. 16 ಅಂತಿಮ ದಿನವಾಗಿತ್ತು. ಈ ಕಾರಣದಿಂದಲೂ ರಾಜಕೀಯ ಸಂಚಲನ ಉಂಟಾಗಿದ್ದು, ಒಟ್ಟಿನಲ್ಲಿ ಈ ವಾರದ ಆರಂಭದಿಂದಲೇ ಎಲ್ಲವೂ ಬಿರುಸಾಗಿದೆ. ಇದರೊಂದಿಗೆ ವಾತಾವರಣದಲ್ಲಿನ ಏರು-ಪೇರು, ಮಳೆಯ ವಾತಾವರಣವೂ ಅಲ್ಲಲ್ಲಿ ಕಂಡು ಬರುತ್ತಿದ್ದು, ಇದೊಂದು ವಿಭಿನ್ನವಾದ ವರ್ಷವಾಗಿ ಪರಿಣಮಿಸಿದೆ. -ಶಶಿ