ಸೋಮವಾರಪೇಟೆ, ಅ. 16: ಹೊಂಡಾಗುಂಡಿಯಾಗಿರುವ ಚಿಕ್ಕತೋಳೂರು-ತೋಳೂರುಶೆಟ್ಟಳ್ಳಿ ಸಂಪರ್ಕ ರಸ್ತೆಯನ್ನು ದುರಸ್ತಿಪಡಿಸುವಂತೆ ಹಲವಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನ ಕಾಣದ ಹಿನ್ನೆಲೆ, ಗ್ರಾಮದ ಮಹಿಳೆಯರು ರಸ್ತೆಯ ಗುಂಡಿಗಳಿಗೆ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದರು.
ತೀರಾ ಹದಗೆಟ್ಟು ಹೋಗಿರುವ ರಸ್ತೆಯನ್ನು ಸರಿಪಡಿಸುವಂತೆ ಅನೇಕ ಬಾರಿ ಗ್ರಾ.ಪಂ., ಜಿ.ಪಂ., ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಶೂನ್ಯವಾಗಿದೆ. ಮುಂದಿನ ಒಂದು ತಿಂಗಳ ಒಳಗೆ ರಸ್ತೆ ಕಾಮಗಾರಿ ಪ್ರಾರಂಭಿಸದಿದ್ದರೆ, ಸುತ್ತಮುತ್ತಲ ಗ್ರಾಮಗಳ ಮಹಿಳೆಯರು ಲೋಕೋಪಯೋಗಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು. ಇದರೊಂದಿಗೆ ಲೋಕಸಭಾ ಚುನಾವಣೆಯನ್ನೂ ಬಹಿಷ್ಕರಿಸಲಾಗುವದು ಎಂದು ಮಹಿಳೆಯರು ಎಚ್ಚರಿಸಿದರು.
ಚಿಕ್ಕತೋಳೂರು, ತೋಳೂರುಶೆಟ್ಟಳ್ಳಿ ಸಂಪರ್ಕ ರಸ್ತೆ ಐದು ಕಿ.ಮೀ. ಹೊಂಡಮಯವಾಗಿದೆ. ಕೂತಿ, ದೊಡ್ಡತೋಳೂರು, ಹೊಸಬೀಡು ಗ್ರಾಮಸ್ಥರು ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಹಾಸನ, ಮಂಗಳೂರು, ಅರಕಲಗೂಡು, ಬೆಂಗಳೂರಿಗೆ ಹೋಗಲು ಇದು ಹತ್ತಿರದ ರಸ್ತೆಯಾಗಿದೆ. ತೋಳೂರುಶೆಟ್ಟಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಕಚೇರಿಯಿರುವದರಿಂದ ಚಿಕ್ಕತೋಳೂರು ಗ್ರಾಮಸ್ಥರು ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ಆದರೂ ಈ ರಸ್ತೆಯನ್ನು ದುರಸ್ತಿಪಡಿಸಲು ಯಾರೂ ಮುಂದಾಗಿಲ್ಲ ಎಂದು ಸಿ.ಎಸ್. ಅಶ್ವಿನಿ, ಸಾವಿತ್ರಿ, ಸಿ.ಜೆ. ಕಾವೇರಿ ಅವರುಗಳು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 15 ವರ್ಷಗಳ ಹಿಂದೆ ರಸ್ತೆ ಡಾಮರೀಕರಣ ಮಾಡಲಾಗಿದೆ. ಆದರೆ ರಸ್ತೆ ಎರಡು ಬದಿಯಲ್ಲಿ ಚರಂಡಿ ನಿರ್ಮಿಸದೆ, ರಸ್ತೆ ಮೇಲೆ ನೀರು ಹರಿದು ಹೊಂಡಮಯವಾಗಿದೆ ಎಂದು ಮಂಜುಳಾ, ವರಲಕ್ಷ್ಮೀ, ಲೋಲಾಕ್ಷಿ, ಸೋಮಶೇಖರ್ ಮತ್ತಿತರರು ಆರೋಪಿಸಿದರು.
ಚುನಾವಣೆ ಸಂದರ್ಭದಲ್ಲಿ ಮಾತ್ರ ರಸ್ತೆ ಅಭಿವೃದ್ಧಿ ಬಗ್ಗೆ ಭರವಸೆ ನೀಡುತ್ತಾರೆ. ನಂತರ ಇತ್ತ ತಿರುಗಿಯೂ ನೋಡುವದಿಲ್ಲ ಎಂದು ಸಿ.ಎಸ್. ಜ್ಯೋತಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಈಶ್ವರಿ ಸ್ತ್ರೀಶಕ್ತಿ ಸಂಘ, ವರಲಕ್ಷ್ಮೀ, ಬಸವೇಶ್ವರ, ಮಂಜುನಾಥ, ಕುಮಾರಲಿಂಗೇಶ್ವರ ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.
ರಸ್ತೆ ಕಾಮಗಾರಿಯ ಬಗ್ಗೆ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಕುಮಾರ್, ಚಿಕ್ಕತೋಳೂರು- ದೊಡ್ಡತೋಳೂರು-ದೊಡ್ಡಮನೆಕೊಪ್ಪ ಹಾಗೂ ತೋಳೂರುಶೆಟ್ಟಳ್ಳಿ-ದೊಡ್ಡಮನೆಕೊಪ್ಪ ಮಾರ್ಗದ ಒಟ್ಟು 12 ಕಿ.ಮೀ. ರಸ್ತೆ ಅಭಿವೃದ್ಧಿಗೆ ರೂ. 2.45 ಕೋಟಿ ಹಣವನ್ನು ಸರ್ಕಾರ ಕೊಡಗು ಪ್ಯಾಕೇಜ್‍ನಲ್ಲಿ ಬಿಡುಗಡೆಗೊಳಿಸಿದೆ. ಈಗ ಅಂದಾಜುಪಟ್ಟಿ ತಯಾರಾಗುತ್ತಿದ್ದು, ಎರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.