ಗೋಣಿಕೊಪ್ಪ ವರದಿ, ಅ. 16 : ವಿಜಯದಶಮಿಯಂದು ರಾತ್ರಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ತೇರುಗಳು ರಾತ್ರಿ 11 ಗಂಟೆಗೆ ಉಮಾಮಹೇಶ್ವರಿ ದೇವಾಲಯ ಸಮೀಪ ಸೇರಿಕೊಳ್ಳುವಂತೆ ಗರಿಷ್ಠ ಸಮಯ ಎಂದು ನಿಗದಿಪಡಿಸಿ ಮಂಪಟ ಸಮಿತಿಗಳಿಗೆ ಸೂಚನೆ ನೀಡಲಾಯಿತು.
ಕೆವಿಕೆ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ದಸರಾ ಶಾಂತಿ ಸುವ್ಯವಸ್ಥೆ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡು ಸೂಚನೆ ನೀಡಲಾಯಿತು. ರಾತ್ರಿ 10.30 ಕ್ಕೆ ಕಾವೇರಿ ದಸರಾ ಸಮಿತಿಯ ಚಾಮುಂಡೇಶ್ವರಿ ದೇವಿ ಮಂಟಪ ಹೊರಡುವಂತೆಯೂ, ನಂತರ ಬರುವ ಮಂಟಪಗಳು ಹಿಂದೆ ಸಾಗುವಂತೆ ಸೂಚಿಸಲಾಯಿತು. ತೇರುಗಳು ಪಟ್ಟಣ ಸೇರಲು ವಿಳಂಭವಾಗುವದನ್ನು ನಿಯಂತ್ರಿಸಲು ರಾತ್ರಿ 11 ಗಂಟೆ ಒಳಗೆ ಶೋಭಾಯಾತ್ರೆಯಲ್ಲಿ ಸೇರಿಕೊಳ್ಳು ವಂತೆ ಸೂಚಿಸಲಾಯಿತು.
ಈ ಬಾರಿ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ತೇರುಗಳ ಪ್ರದರ್ಶನದಲ್ಲಿ ವಾಹನ ಬಳಕೆ ಕಡಿಮೆ ಇರುತ್ತದೆ. ಜೆಸಿಬಿ, ಕ್ರೇನ್ ಬಳಕೆ ಮಾಡದ ಕಾರಣ ವಾಹನ ದಟ್ಟಣೆ ಇರುವದಿಲ್ಲ. ಇದರಿಂದಾಗಿ ಜನರ ದಟ್ಟಣೆ ನೋಡಿಕೊಂಡು ರಾತ್ರಿ ಪಟ್ಟಣಕ್ಕೆ ಖಾಸಗಿ ವಾಹನಗಳನ್ನು ಬರಲು ಅವಕಾಶ ಮಾಡುವದಾಗಿ ಪೊಲೀಸರು ಮಾಹಿತಿ ನೀಡಿದರು. ಉಳಿದಂತೆ ಪೊನ್ನಂಪೇಟೆ ರಸ್ತೆ ಒಂದು ಬದಿಯಲ್ಲಿ ಪಾರ್ಕಿಂಗ್, ಪಟ್ಟಣದ ಪ್ರೌಢಶಾಲೆ ಮೈದಾನದಲ್ಲಿ ಪಾರ್ಕಿಂಗ್ ಹೀಗೆ ಸಾಕಷ್ಟು ಹೆಚ್ಚುವರಿ ವಾಹನ ನಿಲುಗಡೆಗೆ ಜನರ ದಟ್ಟಣೆ ನೋಡಿಕೊಂಡು ನಿರ್ವಹಿಸುವದಾಗಿ ವೃತ್ತ ನಿರೀಕ್ಷಕರುಗಳಾದ ಪಿ.ಕೆ. ರಾಜು ಹಾಗೂ ದಿವಾಕರ್ ತಿಳಿಸಿದರು. ಉಳಿದಂತೆ ವಾಹನ ನಿಲುಗಡೆಗೆ ಈಗಾಗಲೇ ಜಿಲ್ಲಾಧಿಕಾರಿ ಆದೇಶದಂತೆ ಪಾಲಿಸಲು ತಿಳಿಸಲಾಯಿತು. ಸಾರ್ವಜನಿಕರು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ ರೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಳ್ಳಲಾಯಿತು. ತೇರುಗಳ ಪ್ರದರ್ಶನ ಸಂದರ್ಭ ಗರಿಷ್ಠ 3 ವಾಹನಗಳನ್ನು ಬಳಸುವದಾಗಿ ಮಂಟಪ ಸಮಿತಿಗಳ ಪದಾಧಿಕಾರಿ ಗಳು ತಿಳಿಸಿದರು.
ತೇರುಗಳು ಬಂದು ಸೇರುವ ಉಮಾಮಹೇಶ್ವರಿ ದೇವಾಲಯದಿಂದ ಮುಳಿಯ ಜ್ಯುವೆಲ್ಲರಿವರೆಗೆ ಹೆಚ್ಚಿನ ಜನರು ಸೇರುತ್ತಾರೆ. ಈ ವ್ಯಾಪ್ತಿಯಲ್ಲಿ ಕತ್ತಲು ಹೆಚ್ಚಿರುವದರಿಂದ ಹೆಚ್ಚುವರಿ ಬೆಳಕು ಅವಶ್ಯಕ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಕ್ರಮಕೈಗೊಳ್ಳಬೇಕು ಎಂದು ವೃತ್ತ ನಿರೀಕ್ಷಕ ರಾಜು ಸಲಹೆ ನೀಡಿದರು.
ತೇರು ಮೆರವಣಿಗೆ ಸಂದರ್ಭ ಡಿಜೆ ಬಳಕೆ ಕಾನೂನಿಗೆ ವಿರುದ್ದವಾಗಿರುವದರಿಂದ ಸ್ಪೀಕರ್‍ಗಳ ಬಳಕೆ ಮಾಡುವಂತೆ ನಿರ್ದೇಶನ ನೀಡಲಾಯಿತು. ಶೋಭಾಯಾತ್ರೆ ನಡೆದ ಮಾರನೆಯ ದಿನ ವಿದ್ಯುತ್ ಸಮಸ್ಯೆ ಪರಿಹರಿಸಿಕೊಳ್ಳಲು ಅಕ್ಟೋಬರ್ 20 ರ ಒಳಗೆ ಹೆಚ್ಚುವರಿಯಾಗಿ 3 ಲೈನ್‍ಮನ್‍ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸೆಸ್ಕ್ ಜೆಇ ಅರುಣ್‍ಕುಮಾರ್ ತಿಳಿಸಿ ದರು. ವಿವಿಧ ಸಮಿತಿಗಳ ಪದಾಧಿಕಾರಿಗಳು, ಇಲಾಖೆ ಅಧಿಕಾರಿ ಗಳು ಪಾಲ್ಗೊಂಡಿದ್ದರು.
ಕಾವೇರಿ ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಕಾರ್ಯಾಧ್ಯಕ್ಷ ಬಿ.ಎನ್. ಪ್ರಕಾಶ್, ಗ್ರಾ. ಪಂ ಅಧ್ಯಕ್ಷೆ ಸೆಲ್ವಿ, ಉಪ ತಹಶೀಲ್ದಾರ್ ರಾಧಕೃಷ್ಣ, ತಾ.ಪಂ. ಸದಸ್ಯ ಜಯ ಪೂವಯ್ಯ, ಪೊಲೀಸ್ ಉಪನಿರೀಕ್ಷಕ ಶ್ರೀಧರ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಉಪಸ್ಥಿತರಿದ್ದರು.
-ವರದಿ : ಸುದ್ದಿಪುತ್ರ