ಮಡಿಕೇರಿ, ಅ. 15 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಕ್ಟೋಬರ್, 17 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂದು ಬೆಳಿಗ್ಗೆ ನಗರದ ಗಾಂಧಿ ಮೈದಾನದಲ್ಲಿ ಸಂತ್ರಸ್ತರ ಜೊತೆ ಸಂವಾದ ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಆದ್ದರಿಂದ ಪುನರ್ವಸತಿ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕಾರ್ಯಗಳು ಹಾಗೂ ಕಾಮಗಾರಿಗಳ ಬಗ್ಗೆ ನಿಖರ ಮಾಹಿತಿ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬು ಕುಮಾರ್ ಅವರು ತಿಳಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪುನರ್‍ವಸತಿ ಸಂಬಂಧಿಸಿದಂತೆ ಈಗಾಗಲೇ ನಿವೇಶನದ ಭೂಮಿ ಸಮತಟ್ಟು ಮಾಡಿ, ಬಡಾವಣೆ ನಿರ್ಮಾಣಕ್ಕೆ ಸಿದ್ಧತೆ ಮಾಡಿ ಕೊಳ್ಳಲಾಗಿದೆ. ಹಾಗೆಯೇ ಅತಿವೃಷ್ಟಿಯಿಂದಾಗಿ ರಸ್ತೆ, ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡಗಳ ಹಾನಿಯಾಗಿದ್ದು, ಈ ಕಾಮಗಾರಿಗಳ ಪ್ರಗತಿ, ಮತ್ತಿತರ ಬಗ್ಗೆ ನಿಖರ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಸೂಚನೆ ನೀಡಿದರು.ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು, ನಿರ್ದೇಶನಗಳು ಕ್ಷೇತ್ರದಲ್ಲಿ ಕಾರ್ಯರೂಪಕ್ಕೆ ಬರಬೇಕು. ಪ್ರಕೃತಿ ವಿಕೋಪದ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿರುವ ಕಾರ್ಯಗಳ ಬಗ್ಗೆ ರಾಜಧಾನಿಯವರೆಗೂ ತಿಳಿಯು ವಂತಾಗಬೇಕು. ಆ ನಿಟ್ಟಿನಲ್ಲಿ ವೆಬ್‍ಸೈಟ್, ಟ್ವೀಟರ್, ಪೇಸ್‍ಬುಕ್ ಮತ್ತಿತರ ಸಾಮಾಜಿಕ ಜಾಲತಾಣ ಗಳಲ್ಲಿ ಅಪ್‍ಡೇಟ್ ಮಾಹಿತಿ ಒದಗಿಸುವಂತೆ ಅನ್ಬುಕುಮಾರ್ ಅವರು ನಿರ್ದೇಶನ ನೀಡಿದರು.

ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ರಸ್ತೆಗಳು ಗುಂಡಿ ಮುಚ್ಚುವದು, ಟಾರ್ ಹಾಕುವದು ಮತ್ತಿತರ ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕು. ವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಹೇಳಿದರು.

ಅತಿವೃಷ್ಟಿಯಿಂದ ಉಂಟಾದ ಬೆಳೆ ನಷ್ಟ ಸಂಬಂಧ ಈಗಾಗಲೇ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಕೂಡಲೇ ಪರಿಹಾರ ವಿತರಣೆ ಮಾಡುವಂತೆ ಸೂಚಿಸಿದರು.

(ಮೊದಲ ಪುಟದಿಂದ) ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಮಾತನಾಡಿ ಪುನರ್ವಸತಿಯನ್ನು ತ್ವರಿತವಾಗಿ ಕಲ್ಪಿಸಬೇಕು. ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಸೆಸ್ಕ್ ಹೀಗೆ ಆಯಾಯ ಇಲಾಖೆಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಿದ್ದು, ಪ್ರಕೃತಿ ವಿಕೋಪದ ಕಾಮಗಾರಿಗಳನ್ನು ಆದ್ಯತೆ ಮೇಲೆ ನಿರ್ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಖ್ಯಮಂತ್ರಿಯವರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಶಿಷ್ಟಾಚಾರ ಪಾಲನೆ ಮಾಡುವದು, ಗಾಂಧೀ ಮೈದಾನದಲ್ಲಿ ವೇದಿಕೆ ನಿರ್ಮಾಣ, ಆಸನ ವ್ಯವಸ್ಥೆ, ಸಂವಾದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವದು ಮತ್ತಿತರ ಬಗ್ಗೆ ಸೂಚನೆ ನೀಡಲಾಯಿತು.

ಹೆಚ್ಚುವರಿ ವಿಶೇಷ ಜಿಲ್ಲಾಧಿಕಾರಿ ಜಗದೀಶ್ ಅವರು ನಿರಾಶ್ರಿತರಿಗಾಗಿ ಈಗಾಗಲೇ ಜಾಗ ಗುರುತಿಸಿ ಭೂಮಿ ಸಮತಟ್ಟು ಮಾಡಿ ಮನೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆಣ್ಣೇಕರ್ ಅವರು ಮಾತನಾಡಿ, ಮುಖ್ಯಮಂತ್ರಿ ಆಗಮನ ಹಿನ್ನೆಲೆ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದರು.

ಜಿ.ಪಂ. ಸಿಇಒ ಲಕ್ಷ್ಮೀಪ್ರಿಯ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ವಿವಿಧ ಇಲಾಖೆ ಅಧಿಕಾರಿಗಳು ಹಲವು ಮಾಹಿತಿ ನೀಡಿದರು.