ಕುಶಾಲನಗರ, ಅ. 13: ಗುಮ್ಮನಕೊಲ್ಲಿಯ ದಿ. ಕ್ರೈಸ್ಟ್ ಸ್ಕೂಲ್ ಪ್ರಾಥಮಿಕ ಶಾಲೆ ವತಿಯಿಂದ ಮೋಟಾರ್ ವಾಹನಗಳ ಒತ್ತಡ ಕಡಿಮೆಗೊಳಿಸಲು ಆಗ್ರಹಿಸಿ ಸೈಕಲ್ ಜಾಥಾ ನಡೆಯಿತು.
ಸ್ಥಳೀಯ ಕಾರು ನಿಲ್ದಾಣದಿಂದ ಆರಂಭಗೊಂಡ ಸೈಕಲ್ ಜಾಥಾಗೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಪಿ.ಪಿ. ಸೋಮೇಗೌಡ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹೆಚ್ಚುತ್ತಿರುವ ವಾಹನಗಳ ದಟ್ಟಣೆಯಿಂದ ವಾಯು ಹಾಗೂ ಶಬ್ಧ ಮಾಲಿನ್ಯ ಉಂಟಾಗು ತ್ತಿದೆ. ಪಟ್ಟಣ ಮತ್ತು ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಹನಗಳಿಂದ ಪಾದಚಾರಿಗಳಿಗೂ ಅನಾನುಕೂಲ ಉಂಟಾಗುತ್ತಿದ್ದು ಈ ಹಿನ್ನೆಲೆ ಪುಟಾಣಿಗಳು ಹಮ್ಮಿಕೊಂಡಿರುವ ಜಾಗೃತಿ ಜಾಥಾ ಮಹತ್ವದಾಗಿದೆ ಎಂದರು.
ವಾಹನಗಳ ಒತ್ತಡ ತಪ್ಪಿಸಲು ನಿರ್ದಿಷ್ಟ ಸ್ಥಳಗಳಿಗೆ ತೆರಳುವವರು ಪ್ರತ್ಯೇಕ ವಾಹನಗಳನ್ನು ಬಳಸದೆ ಒಂದೇ ವಾಹನದಲ್ಲಿ ತೆರಳುವ ಮೂಲಕ ವಾಹನಗಳ ಒತ್ತಡ ಕಡಿಮೆಗೊಳಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕ ಉದಯ ಪ್ರಕಾಶ್, ಶಿಕ್ಷಕ ವೃಂದ ಹಾಗೂ ಪೋಷಕ ವೃಂದದವರು ಪಾಲ್ಗೊಂಡಿದ್ದರು. ಕಾರು ನಿಲ್ದಾಣದಿಂದ ಪುಟಾಣಿಗಳ ಸೈಕಲ್ ಜಾಥಾ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿಬಂದು ನಗರ ಠಾಣೆ ಬಳಿ ಸಮಾಪ್ತಿಗೊಂಡಿತು.