ಮಡಿಕೇರಿ, ಅ.13: ಕೇಂದ್ರ ಸರ್ಕಾರದ ‘ಮುದ್ರಾ’ ಯೋಜನೆಯಡಿ ಸಾಲ ಸೌಲಭ್ಯ ಒದಗಿಸಲು ಕಠಿಣ ನಿಯಮಗಳನ್ನು ಅನುಸರಿಸುತ್ತಿರುವ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಕೆಡಿಸಿಸಿ)ಸರಳ ಕ್ರಮಗಳನ್ನು ಮುಂದಿನ ಹತ್ತು ದಿನಗಳ ಒಳಗಾಗಿ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸುವದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅತ್ಯಂತ ಸರಳವಾದ ಕ್ರಮಗಳ ಮೂಲಕ ಮುದ್ರಾ ಯೋಜನೆಯಡಿ ಬಡವರ್ಗದ ಮಂದಿಗೆ ಸಾಲ ಸೌಲಭ್ಯವನ್ನು ಒದಗಿಸಲು ಈಗಾಗಲೆ ಮುಂದಾಗಿದ್ದಾರೆ. ಈ ಯೋಜನೆಯಡಿ ಬ್ಯಾಂಕ್‍ನಲ್ಲಿ ಖಾತೆಯೊಂದನ್ನು ಹೊಂದುವದರೊಂದಿಗೆ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯ ದಾಖಲೆಗಳನ್ನಷ್ಟೆ ಆಧರಿಸಿ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಬಡ ಮಂದಿಗೆ ಸರಳ ಕ್ರಮಗಳ ಮೂಲಕ ಸಾಲ ಸೌಲಭ್ಯವನ್ನು ಒದಗಿಸಿರುವ ಸಾಕಷ್ಟು ಉದಾಹರಣೆಗಳಿರುವದಾಗಿ ತಿಳಿಸಿದರು.

ಬಡವರ್ಗದ ಆರ್ಥಿಕ ಚೇತರಿಕೆಗಾಗಿ ಕೇಂದ್ರದ ಬಿಜೆಪಿ ಸರ್ಕಾರ ಘೋಷಿಸಿದ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಒದಗಿಸಲು, ಬಿಜೆಪಿ ಪಕ್ಷವೆ ಅಧಿಕಾರದಲ್ಲಿರುವ ಕೆಡಿಸಿಸಿ ಬ್ಯಾಂಕ್ ಮಾತ್ರ ಸರಳ ಕ್ರಮಗಳ ಬದಲಾಗಿ ಹತ್ತು ಹಲವು ದಾಖಲೆಗಳನ್ನು ಕೇಳುತ್ತಿದೆ. ಈ ಬ್ಯಾಂಕ್‍ನಲ್ಲಿ ಮುದ್ರಾ ಯೋಜನೆಯ ಸಾಲ ಸೌಲಭ್ಯ ಒದÀಗಿಸಲು ಕೇಳಿದಾಗ ಆಧಾರ್, ಮತದಾರರ ಗುರುತಿನ ಚೀಟಿ, ಮನೆಯ ಫಾರಂ ನಂ.3 ಮತ್ತು 200 ರೂ.ಗಳ ಛಾಪಾ ಕಾಗದ, 2 ಖಾಲಿ ಚೆಕ್ ಮತ್ತು ಇಬ್ಬರು ಜಾಮೀನುದಾರರು, ಅವರಲ್ಲಿ ಒಬ್ಬ ಜಾಮೀನುದಾರರ ಬಳಿ ಆರ್‍ಟಿಸಿ ಇರಬೇಕೆಂದು ಕೇಳುತ್ತಿರುವದಾಗಿ ಆರೋಪಿಸಿದರು. ಕೇಂದ್ರದ ಉಪಯುಕ್ತ ಯೋಜನೆಯ ಸೌಲಭ್ಯವನ್ನು ಪಡೆಯಲು ಬಡ ಮಂದಿ ಕೆಡಿಸಿಸಿ ಬ್ಯಾಂಕ್‍ಗೆ ಇಷ್ಟೆಲ್ಲ ದಾಖಲೆಗಳನ್ನು ನೀಡುವದಾದರೂ ಹೇಗೆಂದು ದಿವಾಕರ್ ಪ್ರಶ್ನಿಸಿ, ತಕ್ಷÀಣ ಬ್ಯಾಂಕ್ ಮುದ್ರಾ ಯೋಜನೆಯ ಸಾಲ ಸೌಲಭ್ಯ ಒದಗಿಸಲು ನಿಯಮಗಳನ್ನು ಸಡಿಲಿಸುವಂತೆ ಆಗ್ರಹಿಸಿದರು. ಗೋಷ್ಠಿಯಲ್ಲಿ ದಸಂಸ ಮಡಿಕೇರಿ ತಾಲೂಕು ಸಂಚಾಲಕ ಹೆಚ್.ಎಸ್. ಕುಮಾರ್, ತಾಲೂಕು ಸಂಘÀಟನಾ ಸಂಚಾಲಕ ಎಂ.ಪಿ. ದೀಪಕ್ ಉಪಸ್ಥಿತರಿದ್ದರು.