ಸೋಮವಾರಪೇಟೆ, ಅ. 11: ಇಲ್ಲಿನ ಸೋಮೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವ ವಿಧ್ಯುಕ್ತವಾಗಿ ಆರಂಭವಾಯಿತು.
ನವರಾತ್ರಿ ಅಂಗವಾಗಿ ನಡೆಯಲಿರುವ 9 ದಿನಗಳ ವಿಶೇಷ ಪೂಜಾ ಕಾರ್ಯಕ್ರಮ ಬೆಳಿಗ್ಗೆ ಆರಂಭಗೊಂಡಿತು. ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಆಂಜನೇಯ ದೇವಾಲಯದ ಸಮೀಪದ ರತ್ನಪದ್ಮನಾಭ ಅವರ ಮನೆಯಿಂದ ಅಲಂಕೃತ ವಾಹನದ ಮೂಲಕ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಅರ್ಚಕ ಪ್ರಸನ್ನಭಟ್ ನೇತೃತ್ವದಲ್ಲಿ ವಿವಿಧ ಪೂಜೆಗಳು ನಡೆದವು.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಕಾರ್ಯದರ್ಶಿ ಎಸ್.ಡಿ. ವಿಜೇತ್, , ದೇವಿ ಬಳಗದ ಅಧ್ಯಕ್ಷೆ ವಸಂತ ರಮೇಶ್, ಮಾತಾ ಬಳಗದ ಅಧ್ಯಕ್ಷೆ ಪಂಕಜಾ ಶ್ಯಾಮ್ ಸುಂದರ್, ಮಹಿಳಾ ಸಮಾಜದ ಅಧ್ಯಕ್ಷೆ ಗಾಯತ್ರಿ ನಾಗರಾಜ್ ಮತ್ತಿತರರು ಇದ್ದರು.