ಮಡಿಕೇರಿ, ಅ.10 : ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ವ್ಯಾಖ್ಯಾನಗಳು ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಾಡಿನ ಜನತೆಗೆ ನೈಜ ಸಂಗತಿಯನ್ನು ತಿಳಿಸುವ ನಿಟ್ಟಿನಲ್ಲಿ ‘ಪ್ರಾಕೃತಿಕ ವಿಕೋಪದ ವಾಸ್ತವಗಳು ಮತ್ತು ಮುಂದಿನ ಹೆಜ್ಜೆಗಳು’ ಎಂಬ ವಿಷಯದ ಕುರಿತ ಸಂವಾದವನ್ನು ಆಯೋಜಿಸಲಾಗಿದೆ.
ಸಮಾನ ಮನಸ್ಕರ ವೇದಿಕೆ ವತಿಯಿಂದ ಅ.13ರ ಪೂರ್ವಾಹ್ನ 10.30 ಗಂಟೆಗೆ ನಗರದ ಬಾಲಭವನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದಲ್ಲಿರುವ ಭೂ ಶಾಸ್ತ್ರಜ್ಞ ಐಚೆಟ್ಟಿರ ಜಿ.ಮಾಚಯ್ಯ ಅವರು ವಿಚಾರ ಮಂಡನೆ ಮಾಡಲಿದ್ದಾರೆ ಎಂದು ವೇದಿಕೆಯ ಪ್ರಮುಖರಾದ ಚೇರಂಡ ನಂದ ಸುಬ್ಬಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಹಲವು ವಿವಿಧ ವ್ಯಾಖ್ಯಾನಗಳು ವ್ಯಕ್ತವಾಗುತ್ತಿದ್ದು, ಕೆಲವರು ಈ ದುರ್ಘಟನೆ ನೈಸರ್ಗಿಕವಾಗಿ ಜರುಗಿದ್ದು ಎಂದು ವಾದಿಸಿದರೆ, ಮತ್ತೆ ಕೆಲವರು ಇದು ಮಾನವ ನಿರ್ಮಿತವಾದುದು ಎಂದು ಹೇಳುತ್ತಿದ್ದಾರೆ. ಅದರಲ್ಲೂ ಪರಿಸರವಾದಿಗಳೆಂದು ಕರೆಸಿಕೊಳ್ಳುತ್ತಿರುವ ಕೆಲವರು ನಿಸರ್ಗದೊಂದಿಗೆ ಮನಷ್ಯ ನಡೆಸಿದ ಹಸ್ತಕ್ಷೇಪದಿಂದ ಇದು ಘಟಿಸಿದೆ ಎಂದು ಹೇಳುವದರೊಂದಿಗೆ ಜನರಲ್ಲಿ ಭಯ ಹುಟ್ಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಯಾವದೇ ವಾದಗಳು ವೈಜ್ಞಾನಿಕ ತಳಹದಿಯ ಮೇಲೆ ನಡೆಯುತ್ತಿಲ್ಲ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ದುರಂತಕ್ಕೆ ನಿಜವಾದ ಕಾರಣಗಳೇನು? ಇದಕ್ಕೆ ಪರಿಹಾರಗಳು ಏನು ಎಂಬದರ ಬಗ್ಗೆ ನಾಡಿನ ಜನರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ವೇದಿಕೆಯು ಕೊಡಗಿನವರೇ ಆಗಿದ್ದು, ಪ್ರಸಕ್ತ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭೂ ಶಾಸ್ತ್ರಜ್ಞ ಐಚೆಟ್ಟಿರ ಜಿ.ಮಾಚಯ್ಯ ಅವರಿಂದ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಾಕೃತಿಕ ವಿಕೋಪವನ್ನು ತಡೆಯುವದು ಅಸಾಧ್ಯ. ಆದರೆ ಅದರಿಂದ ಮನುಷ್ಯರಿಗೆ ಹಾಗೂ ಇತರ ಜೀವಿಗಳಿಗೆ ಆಗುವ ಹಚ್ಚಿನ ಹಾನಿಯನ್ನು ತಪ್ಪಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಾವು ಅನುಸರಿಸಬೇಕಾದ ಮಾರ್ಗಗಳೇನು ಎಂಬ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದು, ಹಿರಿಯ ಚಿಂತಕ ಎ.ಕೆ. ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿ.ಪಿ.ಶಶಿಧರ್, ಕೆ.ಆರ್. ವಿದ್ಯಾಧರ್, ಬೇಕಲ್ ರಮಾನಾಥ್, ನೆರವಂಡ ಉಮೇಶ್, ಕುಂಞÂ ಅಬ್ದುಲ್ಲಾ, ಕೊಟ್ಟಿಯಂಡ ಜೀವನ್ ಚಿಣ್ಣಪ್ಪ, ಬಾನಗದ್ದೆ ಪ್ರದೀಪ್, ಟಿ.ಹೆಚ್. ಅಬೂಬಕ್ಕರ್, ಕಾಳಚಂಡ ರವಿ ತಮ್ಮಯ್ಯ, ಕೆ.ಜೆ.ಭರತ್, ಕೀಪಾಡಂಡ ಮಧು ಬೋಪಣ್ಣ, ಜಿ. ಚಿದ್ವಿಲಾಸ್, ಚೆಯ್ಯಂಡ ಸತ್ಯ, ಬಿ.ಆರ್.ನಾಗೇಂದ್ರ ಪ್ರಸಾದ್, ನವೀನ್ ಅಂಬೆಕಲ್, ಕೆ.ಎಂ.ಗಣೇಶ್ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು ತಜ್ಞರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಪರಿಸರದ ಬಗ್ಗೆ ನೈಜ ಕಾಳಜಿ ಹೊಂದಿರುವ ರೈತರು, ಕೃಷಿಕರು, ವಾಣಿಜ್ಯೋದ್ಯಮಿಗಳು, ಕೊಡಗಿನ ಜನಸಾಮಾನ್ಯರು ಮುಕ್ತವಾಗಿ ಭಾಗವಹಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಹೆದ್ದಾರಿ ಸಂಚಾರ ನಿರ್ಬಂಧಿಸಲು ಯತ್ನ : ದಕ್ಷಿಣ ಕೊಡಗಿನ ಮತ್ತಿಗೋಡು ಆನೆಕ್ಯಾಂಪ್ ಬಳಿ ಸೋಮವಾರ ಮುಂಜಾನೆ ಖಾಸಗಿ ಬಸ್ ಡಿಕ್ಕಿಯಾಗಿ ಸಾಕಾನೆ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಇದೀಗ ಆ ಮಾರ್ಗದಲ್ಲಿ ರಾತ್ರಿ ವಾಹನ ಸಂಚಾರವನ್ನು ನಿರ್ಬಂಧಿಸಲು ಅರಣ್ಯ ಇಲಾಖೆ ಪ್ರಯತ್ನ ನಡೆಸುತ್ತಿದೆ ಎಂದು ನಂದ ಸುಬ್ಬಯ್ಯ ಇದೇ ಸಂದರ್ಭ ಆರೋಪಿಸಿದರು.
ಬಸ್ ಡಿಕ್ಕಿಯಾಗಿ ಆನೆ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಬಸ್ ಚಾಲಕ ಮತ್ತು ಮಾಲೀಕನ ವಿರುದ್ಧ ಮೋಟಾರು ವಾಹನ ಕಾಯ್ದೆ ಅಡಿ ಕೇಸ್ ದಾಖಲಿಸುವ ಬದಲು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕೇಸ್ ದಾಖಲಿಸುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಆ ಮೂಲಕ ಹುಣಸೂರು-ತಿತಿಮತಿ- ವೀರಾಜಪೇಟೆ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧಿಸುವಂತೆ ಸರಕಾರದ ಮೇಲೆ ಒತ್ತಡ ತರುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಒಂದು ವೇಳೆ ಇದು ಜಾರಿಯಾದಲ್ಲಿ ದಕ್ಷಿಣ ಕೊಡಗಿನ ಮೂಲಕ ರಾತ್ರಿ ವೇಳೆ ಸಂಚಾರ ದುಸ್ತರವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ವನ್ಯಪ್ರಾಣಿಗಳಿಗೆ ಮಾಲೀಕರು ಯಾರು ಎಂಬದನ್ನು ನಮೂದಿಸಿಲ್ಲ. ಆದರೆ ಅವು ಸತ್ತಾಗ ಅರಣ್ಯ ಇಲಾಖೆ ಅಧಿಕಾರಿಗಳು, ಪರಿಸರವಾದಿಗಳು ಅವುಗಳ ಪರ ಧ್ವನಿ ಎತ್ತುತ್ತಾರೆ. ಸಾಕಾನೆ ಶಿಬಿರಗಳಲ್ಲಿ ಇಂತಿಷ್ಟೇ ಆನೆಗಳು ಇರಬೇಕು ಎಂದು ನಿಯಮವಿದ್ದರೂ, ಅದಕ್ಕೆ ವಿರುದ್ಧವಾಗಿ ಅರಣ್ಯ ಇಲಾಖೆ ಆನೆಗಳನ್ನು ಸಾಕುತ್ತಿದೆ. ಅವುಗಳಿಗೆ ಹೊಟ್ಟೆ ತುಂಬ ಆಹಾರ ನೀಡಲಾಗದೆ ಅವುಗಳನ್ನು ಆಹಾರ ಅರಸಲು ಅರಣ್ಯಕ್ಕೆ ಅಟ್ಟುತ್ತಿದೆ. ಈ ರೀತಿಯಾಗಿ ಓಡಾಡುವ ಆನೆಗಳು ಕೆಲವು ಬಾರಿ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದರೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಆಕಸ್ಮಿಕವಾಗಿ ಸಾವಿಗೀಡಾಗುತ್ತವೆ. ಇಂತಹ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವದಕ್ಕಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಾರೆ ಎಂದು ಅವರು ಆರೋಪಿಸಿದರು. ಅರಣ್ಯಾಧಿಕಾರಿಗಳ ಇಂತಹ ಕ್ರಮದ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ಹೂಡುವದು ಅನಿವಾರ್ಯವಾಗಿದೆ ಎಂದು ನಂದಾ ಸುಬ್ಬಯ್ಯ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ವಕೀಲ ಕುಂಞÂ ಅಬ್ದುಲ್ಲಾ ಉಪಸ್ಥಿತರಿದ್ದರು.