ಕೂಡಿಗೆ, ಅ 10: ಶಿರಂಗಾಲ ದಿಂದ ಕುಶಾಲನಗರದವರೆಗಿನ ರಸ್ತೆ ಅಗಲೀಕರಣ ಮತ್ತು ರಾಜ್ಯ ಹೆದ್ದಾರಿಯಾಗಿ ಪರಿವರ್ತನೆಗೊಂಡು ಏಳು ವರ್ಷ ಕಳೆದಿದೆ. ಅಂದಿನಿಂದಲೂ ರಸ್ತೆಯ ಎರಡೂ ಬದಿಗಳಲ್ಲಿಯೂ ದೊಡ್ಡ ದೊಡ್ಡ ಗಿಡಗಂಟಿಗಳು ಬೆಳೆದು ನಿಂತಿದ್ದವು. ಇದರಿಂದ ವಾಹನ ಸವಾರರಿಗೂ ತೊಂದರೆಯಾಗುತ್ತಿತ್ತು. ಆದರೆ ಇದೀಗ ಲೋಕೋಪಯೋಗಿ ಇಲಾಖೆಯ ವತಿಯಿಂದ ಕಾಡು ಕಡಿದು ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಲಾಗುತ್ತಿದೆ. ಇದರ ಬಗ್ಗೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಆಯಾ ಗ್ರಾಮದ ಹೊಟೇಲ್ ಮತ್ತು ಅಂಗಡಿಗಳ ಮಾಲೀಕರಿಗೆ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಹಾಗೂ ಪ್ಲಾಸ್ಟಿಕ್‍ಗಳನ್ನು ಉಪಯೋಗಿಸದಂತೆ, ಬಳಸಿದ ಪ್ಲಾಸ್ಟಿಕ್‍ಗಳನ್ನು ರಸ್ತೆಯ ಬದಿಯಲ್ಲಿ ಹಾಕದಂತೆ ತಿಳಿಸಿದ್ದಾರೆ.
ಗ್ರಾಮಸ್ಥರು, ಅಂಗಡಿ ಮತ್ತು ಹೊಟೇಲ್‍ಗಳ ಮಾಲೀಕರು ಎಲ್ಲೆಂದರೆಲ್ಲಿ ಕಸವನ್ನು ಹಾಕದೆ, ಕಸ ಹಾಕಲೆಂದೇ ನಿಗದಿಯಾಗಿರುವ ಕಸದ ತೊಟ್ಟಿಗೆ ಹಾಕಿ, ತಮ್ಮ ತಮ್ಮ ಗ್ರಾಮಗಳ ರಸ್ತೆ ಬದಿ ಹಾಗೂ ಸುತ್ತಮುತ್ತಲು ಸ್ವಚ್ಛತೆಯನ್ನು ಕಾಪಾಡಬೇಕು. ಶಿರಂಗಾಲ-ಕುಶಾಲನಗರದವರೆಗೆ ರಸ್ತೆಯ ಇಕ್ಕೆಲಗಳ ಗಿಡಗಂಟಿಗಳನ್ನು ಕಡಿಯುವ ಕೆಲಸ ನಡೆಯುತ್ತಿದ್ದು, ಇದರ ಜೊತೆಯಲ್ಲಿ ಭಾರಿ ಮಳೆಯಿಂದಾಗಿ ರಸ್ತೆಯು ಗುಂಡಿ ಬಿದ್ದಿರುವ ಜಾಗಗಳಿಗೆ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಇಂಜಿನಿಯರ್ ಪೀಟರ್ ಹೇಳಿದ್ದಾರೆ.