ಮಡಿಕೇರಿ, ಅ. 10: ಅನಧಿಕೃತವಾಗಿ ದೇವರಕಾಡು ಜಾಗವನ್ನು ಒತ್ತುವರಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖಾ ಸಿಬ್ಬಂದಿಗಳು ಜಾಗವನ್ನು ತೆರವುಗೊಳಿಸಿದ್ದಾರೆ.
ಅಭ್ಯತ್‍ಮಂಗಲ ಗ್ರಾಮದಲ್ಲಿ ಒಂಟಿಯಂಗಡಿ ಕುಶಾಲನಗರ ಮಾರ್ಗದ ಮುಖ್ಯರಸ್ತೆಯ ಒತ್ತಿನಲ್ಲಿರುವ ಶ್ರೀ ಅಯ್ಯಪ್ಪ ದೇವರ ಕಾಡುವಿಗೆ ಸೇರಿದ ಜಾಗವನ್ನು ತಮಿಳುನಾಡು ಮೂಲದ ವ್ಯಕ್ತಿ ರಮೇಶ್ ರಾಜ್ ಎಂಬವರು ಒತ್ತುವರಿ ಮಾಡಿಕೊಂಡಿದ್ದರು. ಇಲ್ಲಿ ಸುಮಾರು 35 ಎಕರೆ ಜಾಗ ಹೊಂದಿರುವ ಇವರು ದೇವರಕಾಡುವಿಗೆ ಸೇರಿದ್ದ ಆರು ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದ ಕುರಿತು ಅರಣ್ಯ ಇಲಾಖೆ ಪ್ರಕರಣ ದಾಖಲಿಸಿತ್ತು.
2017ರಲ್ಲಿ ಸೋಮವಾರಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ ಇದನ್ನು ತೆರವುಗೊಳಿಸಲು ಆದೇಶಿಸಲಾಗಿತ್ತು. ಇದರಂತೆ ಇಂದು ಎಸಿಎಫ್ ಎಂ.ಎಸ್. ಚಿಣ್ಣಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಈ ಜಾಗದಲ್ಲಿ ಬೆಳೆಯಲಾಗಿದ್ದ ಕಾಫಿ, ಕರಿಮೆಣಸು ಗಿಡಗಳನ್ನು ತೆರವುಗೊಳಿಸಿ ಜಾಗವನ್ನು ಇಲಾಖೆಯ ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ಅರಣ್ಯ ಇಲಾಖಾ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿಎಫ್ ಎಂ.ಎಸ್. ಚಿಣ್ಣಪ್ಪ ಅವರೊಂದಿಗೆ ವಲಯ ಅರಣ್ಯಾಧಿಕಾರಿ ಅರುಣ್ ಸಿ.ಆರ್, ಉಪ ವಲಯ ಅರಣ್ಯಾಧಿಕಾರಿಗಳಾದ ವಿಲಾಸ್ ಕೆ.ಐ., ಸುಬ್ರಮಣ್ಯ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.