ಕೂಡಿಗೆ, ಅ. 11: ತೊರೆನೂರು ಗ್ರಾಮ ಪಂಚಾಯಿತಿಯ ರೈತರು ತಮ್ಮ ಗ್ರಾಮಗಳಲ್ಲಿ ಕೃಷಿ ಕಣಗಳನ್ನು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮೂಲಕ ನಿರ್ಮಿಸಿಕೊಂಡು ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್ ಹೇಳಿದರು.

ತೊರೆನೂರು ಸಹಕಾರ ಸಂಘದ ಸಮೀಪದಲ್ಲಿ ನಿರ್ಮಿಸಲಾಗಿರುವ ಕೃಷಿ ಕಣವನ್ನು ಪರಿಶೀಲನೆ ಮಾಡಿದ ಸಂದರ್ಭ ಮಾತನಾಡಿದ ಅವರು, ಕಳೆದ ಬಾರಿ ತೊರೆನೂರು ಗ್ರಾಮ ಪಂಚಾಯಿತಿಗೆ ದೊರೆತ ಗಾಂಧಿ ಪುರಸ್ಕಾರದ ರೂ. 1 ಲಕ್ಷ ವೆಚ್ಚದಲ್ಲಿ ಕೃಷಿ ಕಣವನ್ನು ನಿರ್ಮಿಸಲಾಗಿದೆ. ಗ್ರಾ.ಪಂ.ನ ಎಲ್ಲಾ ವಾರ್ಡುಗಳಲ್ಲಿಯೂ ಹೆಚ್ಚು ರೈತರು ಕೃಷಿಯನ್ನೇ ಅವಲಂಬಿಸಿರುವದರಿಂದ ಬೆಳೆದ ಬೆಳೆಗಳನ್ನು ಈ ಕಣದಲ್ಲಿ ಹಾಕಿ ಶುಚಿತ್ವಗೊಳಿಸಲು ಅನುಕೂಲ ವಾಗುತ್ತದೆ. ಆದ್ದರಿಂದ ಇದೇ ಮಾದರಿಯಲ್ಲಿ ಗ್ರಾ.ಪಂ.ನ ಎಲ್ಲಾ ವಾರ್ಡ್‍ಗಳಲ್ಲಿಯೂ ರೈತರು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಯಡಿಯಲ್ಲಿರುವ ಅನುದಾನವನ್ನು ಬಳಸಿಕೊಂಡು ಕಣಗಳನ್ನು ನಿರ್ಮಿಸಿಕೊಳ್ಳಬೇಕು ಎಂದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಮಾತನಾಡಿ, ತೊರೆನೂರು ಗ್ರಾಮ ಪಂಚಾಯಿತಿಗೆ 2017-18ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇನ್ನು ಮುಂದೆಯೂ ಹೆಚ್ಚು ಕಾಮಗಾರಿಗಳನ್ನು ಕೈಗೊಳ್ಳಲು ಗ್ರಾಮಸ್ಥರು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವದರ ಮೂಲಕ ತಮ್ಮ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಗಳಾಗಬೇಕು ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಶಿವರುದ್ರಪ್ಪ, ತೊರೆನೂರು ಸಹಕಾರ ಬ್ಯಾಂಕಿನ ನಿರ್ದೇಶಕ ಕೃಷ್ಣೇಗೌಡ ಇದ್ದರು.