ಗೋಣಿಕೊಪ್ಪಲು, ಅ. 10: ನಿಜಕ್ಕೂ ಕೊಡಗಿನ ಬಾಲಕನ ಅಪ್ರತಿಮ ಸಾಧನೆ ಇದು. ಅಂತರ್ರಾಷ್ಟ್ರೀಯ ಶಿಟೋರಿಯೋ ಕರಾಟೆಯಲ್ಲಿ ಚಿನ್ನ ಹೋಗಲಿ ಕಂಚು ಸಾಧನೆಯೂ ಕಷ್ಟ ಸಾಧ್ಯ. ಈ ಹಿಂದಿನ ಹಲವು ಚಾಂಪಿಯನ್‍ಶಿಪ್‍ನಲ್ಲಿ ಇದು ರುಜುವಾತಾಗಿದೆ. ಆದರೆ, 13ರ ಬಾಲಕ ಡಿ.ಜೆ. ಸ್ಮರಣ್ ನಾಣಯ್ಯನ ಮೇಲೆ ತರಬೇತುದಾರ ಕಿಶೋರ್ ಹಾಗೂ ಪೆÇೀಷಕರಾದ ವಕೀಲ ದೇಯಂಡ ಜಯರಾಮ್-ಶೀತಲ್ ಅವರು ಇಟ್ಟ ನಂಬಿಕೆ ಈ ಬಾರಿ ಹುಸಿಯಾಗಲಿಲ್ಲ. ಕೊಡಗು ಜಿಲ್ಲೆ ಹಾಗೂ ತಾನು ಓದಿದ ಶಾಲೆ ‘ಕಾಪ್ಸ್’ಗೆ ಸ್ಮರಣೀಯ ಕೀರ್ತಿ ತಂದಿದ್ದಾನೆ ಕುಟ್ಟ ಸಮೀಪದ ಕೆ. ಬಾಡಗದ ಹುಡುಗ.
ಸ್ಮರಣ್ ನಾಣಯ್ಯನ ಗೆಲುವಿನ ಹಾದಿ ಸುಗಮವಾಗಿರಲಿಲ್ಲ. ಭಾರತದ ಬದ್ಧ ವೈರಿ ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ತನ್ನದೇ ನೆಲ ಭಾರತದ ಇಬ್ಬರು ಕರಾಟೆ ಪಟುಗಳು ಹಾಗೂ ಅತಿಥೇಯ ಕೊಲಂಬೋದ ಸ್ಪರ್ಧಿಯನ್ನು ಅವರದೇ ನೆಲದಲ್ಲಿ ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾನೆ. ಸುಮಾರು 6 ಸುತ್ತಿನ ಸೆಣಸಿನಲ್ಲಿ ತನ್ನ ಜಾಣ್ಮೆ, ಪೌರುಷದೊಂದಿಗೆ ಎದುರಾಳಿ ಪಟುಗಳಿಗೆ ಬೆವರಿಳಿಸಿ ಅಂತಿಮ ಸುತ್ತಿನಲ್ಲಿ ಗೆಲುವಿನ ಹಾರ ಕೊರಳಿಗೆ ಹಾಕಿಕೊಂಡಿದ್ದಾನೆ.
ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ರಾಷ್ಟ್ರ ಮಟ್ಟದಲ್ಲಿ ಅಪೂರ್ವ ಸಾಧನೆ ಮಾಡಿದ ಬಾಲಕ ಸ್ಮರಣ್ ಇದೀಗ ಅಂತರ್ರಾಷ್ಟ್ರೀಯ ಮಟ್ಟದ ಸಾಧನೆ ಬಗ್ಗೆ ಕೋಚ್ ಕಿಶೋರ್ ಹಾಗೂ ವಕೀಲರಾದ ಜಯರಾಮ್ (ತಂದೆ) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಲೊಂಬೋದಲ್ಲಿ ತಾ. 4 ರಿಂದ ತಾ. 8 ರವರೆಗೆ ಶಿಟೋರಿಯೋ ಕರಾಟೆ ಸ್ಪರ್ಧೆ ನಡೆದಿತ್ತು.